ಕನ್ನಡಪ್ರಭ ವಾರ್ತೆ ಬೆಂಗಳೂರು
ಚಂದ್ರಗ್ರಹಣ ಮಧ್ಯಾಹ್ನ 3.20ಕ್ಕೆ ಆರಂಭವಾಗಿ ಸಂಜೆ 6.47ಕ್ಕೆ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಅಂಜನಾದ್ರಿಯ ಆಂಜನೇಯ ದೇವಾಲಯದಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 7 ಗಂಟೆವರಿಗೆ ದೇವರ ದರ್ಶನವನ್ನು ರದ್ದು ಮಾಡಲಾಗುವುದು. ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಬೆಳಗ್ಗೆ 11.30ರ ನಂತರ ಮಹಾಪೂಜೆ ನೇರವೇರಲಿದ್ದು, ಬಳಿಕ, ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಮಧ್ಯಾಹ್ನದ ಪ್ರಸಾದ ಭೋಜನ ಇರುವುದಿಲ್ಲ. ಸಂಜೆ 7.30ರಿಂದ 8.30ರವರೆಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಮುರ್ಡೇಶ್ವರದಲ್ಲಿ ಬೆಳಗ್ಗೆ 8.30ರ ನಂತರ ಯಾವುದೇ ಪೂಜೆ, ಪುನಸ್ಕಾರ ಇಲ್ಲ. ಬೆಳಗ್ಗೆ ಭಕ್ತರಿಗೆ ಉಪಾಹಾರ ವ್ಯವಸ್ಥೆಯಿದೆ, ಮಧ್ಯಾಹ್ನದ ಊಟ ಇರುವುದಿಲ್ಲ. ಮಧ್ಯಾಹ್ನ 1ರವರೆಗೆ ಭಕ್ತರು ದರ್ಶನ ಪಡೆಯಬಹುದು. ಇಡಗುಂಜಿಯಲ್ಲಿ ಗ್ರಹಣದ ಅವಧಿಯಲ್ಲಿ ಯಾವುದೇ ಸೇವೆ ಇರುವುದಿಲ್ಲ.
ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ದೇವಿಯ ದರ್ಶನವಿರಲಿದೆ. ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪ್ರಸಾದ ಅರ್ಪಣೆ ನಂತರ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆ ಬಳಿಕ ಬಾಗಿಲನ್ನು ಮುಚ್ಚಲಾಗುತ್ತದೆ.ಬೆಂಗಳೂರಲ್ಲಿ ಮಧ್ಯಾಹ್ನ 12 ಗಂಟೆಗೆ ಅಣ್ಣಮ್ಮ ದೇವಾಲಯ, ಕಾಡು ಮಲ್ಲಿಕಾರ್ಜುನ ದೇವಾಲಯಗಳ ಬಾಗಿಲನ್ನು ಮುಚ್ಚಲಾಗುತ್ತದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 8.30ರವರೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ತುಮಕೂರು ಜಿಲ್ಲೆ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಮಧ್ಯಾಹ್ನ 2 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ದಾಸೋಹ ಕೂಡ ಸ್ಥಗಿತಗೊಳ್ಳಲಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಧ್ಯಾಹ್ನ 1:30ಕ್ಕೆ ಬಾಗಿಲು ಮುಚ್ಚಲಾಗುವುದು.
ಆದರೆ, ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟ, ಬೆಳಗಾವಿಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡ, ಬಾದಾಮಿಯ ಬನಶಂಕರಿಯಲ್ಲಿ ಎಂದಿನಿಂದ ದರ್ಶನ ಇರಲಿದೆ. ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಅವಕಾಶವಿದ್ದು, ಹೋಮ, ಹವನ, ತೀರ್ಥ ಪ್ರಸಾದ ಇರುವುದಿಲ್ಲ.