ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.೧೫ರಂದು ಚಾಮರಾಜನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವೈಶಿಷ್ಟ್ಯಪೂರ್ಣವಾದ ಉದ್ದನೆಯ ಮಾನವ ಸರಪಳಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯಸರ್ಕಾರ ಬೀದರ್‌ನಿಂದ ಗಡಿಜಿಲ್ಲೆ ಚಾಮರಾಜನಗರದವರೆಗೂ ಮಾನವ ಸರಪಳಿ ನಿರ್ಮಿಸುವ ಮಹತ್ತರ ಕಾರ್ಯಕ್ರಮ ಹಾಕಿಕೊಂಡಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸರ್ವ ಸಿದ್ದತೆ ಪೂರ್ಣಗೊಂಡಿದೆ ಎಂದರು.ಚಾಮರಾಜನಗರ ಜಿಲ್ಲಾ ಸರಹದ್ದು ಪ್ರಾರಂಭವಾಗುವ ಮೂಗೂರು ಕ್ರಾಸ್‌ನಿಂದ ಚಾಮರಾಜನಗರ ಪಟ್ಟಣದ ರಾಮಸಮುದ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ತನಕ ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ. ಅಂದಾಜು ೨೫ ಕಿ.ಮೀ. ನಷ್ಟು ಮಾನವ ಸರಪಳಿ ರಚನೆ ಮಾಡಲಾಗುತ್ತಿದ್ದು, ೨೪ ಸಾವಿರ ಜನರು ಮಾನವ ಸರಪಳಿಯಲ್ಲಿ ಕೈಜೋಡಿಸುತ್ತಿದ್ದಾರೆ. ಪ್ರತಿ ೧೦೦ ಮೀ, ೫೦೦ ಮೀ, ಒಂದು ಕಿ.ಮೀ, ಹಾಗೂ ೫ ಕಿ.ಮೀ ಅಂತರಕ್ಕೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಆರೋಗ್ಯದ ಹಿತದೃಷ್ಠಿಯಿಂದ ಪ್ರತಿ ೫೦೦ ಮೀ. ಅಂತರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ೧೦೦ ಮೀ. ಅಂತರದಲ್ಲಿ ಬಿಳಿ ಪಟ್ಟೆ ಗುರುತು ಮಾಡಲಾಗಿದೆ, ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿ ಸಸಿ ನೆಡಲಾಗುತ್ತಿದೆ. ವಿದ್ಯಾರ್ಥಿಗಳು, ಇಲಾಖೆ ಅಧಿಕಾರಿ, ಸಿಬ್ಬಂದಿ, ಸಂಘಸಂಸ್ಥೆಗಳ ಮುಖಂಡರು, ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಬೆಳಗ್ಗೆ ೯.೩೦ರಿಂದ ಅಧಿಕೃತವಾಗಿ ಕಾರ್ಯಕ್ರಮ ಆರಂಭವಾಗಲಿದೆ. ನಾಡಗೀತೆ, ಮುಖ್ಯ ಅತಿಥಿಗಳ ಭಾಷಣ, ಸಂವಿಧಾನ ಪ್ರಸ್ತಾವನೆ ವಾಚನ, ಮಾನವ ಸರಪಳಿಯನ್ನು ಡ್ರೋನ್, ವಿಡಿಯೋಗ್ರಫಿ, ಇನ್ನಿತರ ಮೂಲಕ ಚಿತ್ರೀಕರಣ ಮಾಡಿಕೊಳ್ಳುವುದು ನಡೆಯಲಿದೆ. ೧೦ ಗಂಟೆಯ ವೇಳೆಗೆ ಮಾನವ ಸರಪಳಿಯಲ್ಲಿಯೇ ಕೈಗಳನ್ನು ಮೇಲೆತ್ತಿ ’ಜೈ ಹಿಂದ್’ ’ಜೈ ಕರ್ನಾಟಕ’ ಘೋಷಣೆಯನ್ನು ಮೊಳಗಿಸುವ ಮೂಲಕ ಸರಪಳಿ ಕಳಚುವ ಕಾರ್ಯ ಆಗಲಿದೆ. ಬಳಿಕ ಸಸಿ ನಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರರಿಸಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಕ್ಕಾಗಿ ಅತ್ಯಾಕರ್ಷಕ ಪ್ರಶಸ್ತಿಗಳು ಮತ್ತು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ೫ ವಿಭಾಗಗಳಲ್ಲಿ ಪ್ರತಿ ವಿಭಾಗಕ್ಕೆ ತಲಾ ೩ ಪ್ರಶಸ್ತ್ತಿಗಳಂತೆ ೧೫ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮಾನವ ಸರಪಳಿಯಲ್ಲಿ ನಾವೀನ್ಯತೆ, ಅತೀ ಹೆಚ್ಚು ಗಿಡಗಳನ್ನು ನೆಡುವುದು, ಅತೀ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಅತೀ ಹೆಚ್ಚು ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಹಾಗೂ ಜಿಲ್ಲಾ ಸಂಖ್ಯೆಗೆ ಅನುಗುಣವಾಗಿ ಅತ್ಯಂತ ಉದ್ದದ ಮಾನವ ಸರಪಳಿ ರಚನೆಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದರು.ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಹಾಗೂ ವಿಶಿಷ್ಟವಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಚಾಮರಾಜನಗರ ಪಟ್ಟಣದಲ್ಲಿ ಒಂದು ಕಿ.ಮೀ, ವರೆಗೆ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಗುತ್ತಿದೆ. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಮಕ್ಕಳಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರ ವೇಷಭೂಷಣ ಧರಿಸಿದ ಪ್ರದರ್ಶನವು ಇರಲಿದೆ. ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಮಹತ್ವದ ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆ ಭಾಗವಹಿಸಿ ಸಹಕರಿಸಿ ಕೈಜೋಡಿಸುವಂತೆ ಮೋನಾರೋತ್ ಅವರು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಅವರು ಮಾತನಾಡಿ, ಮಾನವ ಸರಪಳಿ ಹಿನ್ನೆಲೆಯಲ್ಲಿ ಮೂಗೂರು ಕ್ರಾಸ್‌ನಿಂದ ಚಾಮರಾಜನಗರದವರೆಗೆ ಎರಡು ರಸ್ತೆ ಇರುವ ಕಡೆಗಳಲ್ಲಿ ಒಂದು ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮತ್ತೊಂದು ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಉಳಿದಂತೆ ಒಂದೇ ರಸ್ತೆ ಇರುವ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ವಾಹನ ಸಂಚಾರ ಹಾಗೂ ಮಾನವ ಸರಪಳಿ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆ ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದರು.