ಉಡುಪಿ: ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಸಂಪ್ರದಾಯದಂತೆ ನಡೆಯುವ ಬಾಳೆ ಮುಹೂರ್ತ ಇಂದು ಮುಂಜಾನೆ 7.45ರ ವೃಶ್ಚಿಕ ಲಗ್ನ ಸಮುಹೂರ್ತದಲ್ಲಿ ಶ್ರೀಮಠದಲ್ಲಿ ನಡೆಯಲಿದೆ.ಮುಂಜಾವ 6.30ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ನಂತರ ಚಂದ್ರೇಶ್ವರ, ಅನಂತೇಶ್ವರ ದೇವರ ಹಾಗೂ ಶ್ರೀ ಕೃಷ್ಣಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥಿಸಿ, ಸೋದೆ ಮಠದ ಆವರಣದಲ್ಲಿರುವ ತೋಟದಲ್ಲಿ ಬಾಳೆ ಗಿಡ, ಕಬ್ಬಿನ ಗಿಡ ಮತ್ತು ತುಳಸಿ ಗಿಡಗಳನ್ನು ನೆಡುವ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಷ್ಟ ಮಠಾಧೀಶರು, ಶ್ರೀಮಠದ ಗಣ್ಯಭಕ್ತರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಮತ್ತು ಬಾಳೆ ನೆಡುವಲ್ಲಿ ಕೈಜೋಡಿಸಲಿದ್ದಾರೆ.ಮೊದಲ ಮುಹೂರ್ತ ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ 2 ವರ್ಷಗಳ ಕಾಲ ಪೂಜೆ ಸಲ್ಲಿಸಲು ಪರ್ಯಾಯ ಪೀಠಾರೋಹಣಕ್ಕೆ ಮೊದಲು ಸಂಪ್ರದಾಯದಂತೆ ನಾಲ್ಕು ಮುಹೂರ್ತಗಳನ್ನು ನೆರವೇರಿಸಲಾಗುತ್ತದೆ. ಅವುಗಳೆಂದರೆ ಕ್ರಮವಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮತ್ತು ಭತ್ತ ಮುಹೂರ್ತಗಳುಅನಾದಿ ಕಾಲದಿಂದಲೂ ಪರ್ಯಾಯ ಮಠದಿಂದ 2 ವರ್ಷಗಳ ಕಾಲ ಕೃಷ್ಣಮಠದಲ್ಲಿ ನಿರಂತರ ಅನ್ನಪ್ರಸಾದಕ್ಕೆ ಅನುಕೂಲವಾಗುವಂತೆ ಈ ಮುಹೂರ್ತಗಳನ್ನು ನಡೆಸಲಾಗುತ್ತಿದೆ.ಮೊದಲ ಮುಹೂರ್ತವು ಇಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಬಾಳೆ ಗಿಡದ ಜೊತೆಗೆ ಕೃಷ್ಣನ ಪೂಜೆಗೆ ಅಗತ್ಯವಿರುವ ಕಬ್ಬು ಮತ್ತು ತುಳಸಿ ಗಿಡಗಳನ್ನು ನೆಡಲಾಗುತ್ತದೆ.
ಶ್ರೀಗಳು ಶ್ರೀ ಮಧ್ವಾನುಜ ಶ್ರೀ ವಿಷ್ಣುತೀರ್ಥರು ಪ್ರಥಮ ಮಠಾಧೀಶರಾಗಿದ್ದ ಸೋದೆ ಮಠದ ಪರಂಪರೆಯ 36ನೇ ಯತಿಗಳಾಗಿ, 2006ರಲ್ಲಿ ತಮ್ಮ ಗುರು ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರಿಂದ ಸಂನ್ಯಾಸ ಸ್ವೀಕರಿಸಿದರು, ಮುಂದೆ ಅವರು ಕೃಷ್ಣಮಠದ 254ನೇ ಪರ್ಯಾಯೋತ್ಸವವನ್ನು ನಡೆಸಲಿದ್ದಾರೆ.