ಎಸ್.ಜಿ. ತೆಗ್ಗಿನಮನಿ
ಭವರೋಗದ ಜಾಡು ತೊರೆದು, ಯೋಗ ನಿಷ್ಠೆಯಿಂದ ಸಮಾಜದಲ್ಲಿ ಸ್ವಾಸ್ಥ್ಯ ನಿರ್ಮಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಪುರುಷರಲ್ಲಿ ಗದಗ ಜಿಲ್ಲೆ ನರಗುಂದ ತಾಲೂಕಿನ ಸುಕ್ಷೇತ್ರ ಭೈರನಹಟ್ಟಿ ಗ್ರಾಮದ ಶ್ರೀ ಗುರು ಬ್ರಹ್ಮಾನಂದ ಪರಮಹಂಸರು ಒಬ್ಬರು.
ಮೂಲತಃ ಗುಜರಾತ ಪ್ರಾಂತದ ಶಿವಬಡೋಚಾ ಗ್ರಾಮದ ಗುರುರಾಮ ಪ್ರಸಾದ್ ಹಾಗೂ ದೇವಜಾನಕಿ ದಂಪತಿಯ ಪುತ್ರ ಬ್ರಹ್ಮಾನಂದ ಪರಮಹಂಸರು, ಬಾಲ್ಯದಲ್ಲಿಯೆ ಅನೇಕ ಲೀಲೆಗಳನ್ನ ತೋರಿ ಸ್ವಗ್ರಾಮದಲ್ಲಿಯೇ ಗುರುತ್ವ ಸಾಧಿಸಿದವರು. ಬಾಲ್ಯದಿಂದಲೆ ಅವರಿಗೆ ಅಧ್ಯಾತ್ಮದತ್ತ ಒಲವಿತ್ತು, ಹಾಗಾಗಿ ಲೌಕಿಕ ಬದುಕಿನ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಬಯಸಿದ ಶ್ರೀಗಳು ಸಂಸಾರ ತ್ಯಜಿಸಿ ದೇಶ ಸಂಚಾರ ಕೈಗೊಂಡು ಢಾಕೋರ ಪಟ್ಟಣಕ್ಕೆ ಬಂದರು. ಅಲ್ಲಿ ಶ್ರೀಕೃಷ್ಣ ದರ್ಶನ ಪಡೆದು ಗುಮಟಿಯ ಗಂಗಾನದಿಯಲ್ಲಿ ಸ್ನಾನಗೈದು ಬಂದಾಗ ಶ್ರೀಗಳು ಅಲ್ಲಿರುವ ಜನರಿಗೆ ದೈವಿ ಸ್ವರೂಪಿಗಳಾಗಿ ಕಂಡುಬಂದರು.ಮನೆ ಬಿಟ್ಟ ಬಾಲಯೋಗಿ ಬ್ರಹ್ಮಾನಂದರು ಉತ್ತರದ ಕಾಶಿ, ದ್ವಾರಕೆಗಳ ದೇವಸನ್ನಿಧಿಯಲ್ಲಿ ಸೇವೆಗೈದು ಹಿಮಾಲಯದಲ್ಲಿ ತಪೋಗೈದರೆಂದು ಪ್ರತೀತಿ ಇದೆ. ತಪಸ್ವಿಗಳಾದ ಯುವ ಬ್ರಹ್ಮಾನಂದ ಶ್ರೀಗಳು ದಕ್ಷಿಣ ಭಾರತದ ಪವಿತ್ರ ಸ್ಥಳಗಳನ್ನೆಲ್ಲ ಸಂದರ್ಶಿಸಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸೇವೆ ಮಾಡಿ ಯೋಗ ಸಾಧನೆಗೈದವರು.
ಪವಾಡ. ಗುರು ಬ್ರಹ್ಮಾನಂದ ಸ್ವಾಮಿಗಳು ಭೈರನಹಟ್ಟಿಗೆ ಬಂದಾಗ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರವಿತ್ತು. ಆ ಸಮಯದಲ್ಲಿ ಗ್ರಾಮಸ್ಥರನ್ನು ಸೇರಿಸಿ ಅವರಿಗೆ ಕೆರೆ ನಿರ್ಮಾಣ ಮಾಡಲು ತಿಳಿಸಿದಾಗ ಶ್ರೀಗಳ ಅಪ್ಪಣೆಯಂತೆ ಜನತೆ ಸೇರಿಕೊಂಡು ಗ್ರಾಮದ 25 ಎಕರೆ ಜಮೀನದಲ್ಲಿ ಬೃಹತ ಕೆರೆ ನಿರ್ಮಾಣ ಮಾಡಿದರು. ಮುಂದೆ ಬರಗಾಲದಿಂದ ಕೆರೆ ತುಂಬದಿದ್ದಾಗ ಬ್ರಹ್ಮಾನಂದ ಶ್ರೀಗಳು ತಮ್ಮ ತಪಸ್ಸಿನಿಂದ ಮಳೆ ತರಸಿದರು. ಇದೇ ರೀತಿ ಗ್ರಾಮದಲ್ಲಿ ಹಲವಾರು ಪವಾಡ ಮಾಡಿದ ಮಹಾನ ಸ್ವಾಮಿಗಳಾಗಿದ್ದರು.
ಕನ್ನಡದ ಧ್ವಜ
ಭೈರನಹಟ್ಟಿ ಸುಮಾರು 100 ವರ್ಷಗಳ ಹಿಂದೆ ಕುಗ್ರಾಮವಾಗಿತ್ತು, ಬ್ರಹ್ಮಾನಂದ ಮಹಸ್ವಾಮಿಗಳ ಪಾದಸ್ವರ್ಶದಿಂದ ಇಂದು ಈ ಗ್ರಾಮ ನಾಡಿನಲ್ಲಿ ಹಲವಾರು ರೀತಿ ಸಾಧನೆ ಮಾಡಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳುತ್ತಾರೆ.
ನಮ್ಮ ಪೂರ್ವಜರು ಹೇಳುವ ಪ್ರಕಾರ ನಾಡಿನಲ್ಲಿ ಭೈರನಹಟ್ಟಿ ಗ್ರಾಮ ಬಹಳ ಹಿಂದುಳಿದಿತ್ತು. ಬ್ರಹ್ಮಾನಂದ ಪೂಜ್ಯರು ಮತ್ತು ಸದ್ಯದ ಶಾಂತಲಿಂಗ ಶ್ರೀಗಳಿಂದ ಇಂದು ನಾಡಿನಲ್ಲಿ ಭೈರನಹಟ್ಟಿ ದೊರೆಸ್ವಾಮಿ ಮಠ, ಕನ್ನಡ ಮಠ ಎಂದು ಖ್ಯಾತಿಯಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಆರ್.ವೈ. ಐನಾಪೂರ.