ಇಂದು ಶ್ರೀಕೃಷ್ಣದೇವರಾಯ ವಿವಿ 13ನೇ ಘಟಿಕೋತ್ಸವ

KannadaprabhaNewsNetwork |  
Published : Sep 04, 2025, 01:01 AM IST
ಬಳ್ಳಾರಿ ವಿವಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕುಲಪತಿ ಪ್ರೊ.ಎಂ.ಮುನಿರಾಜು ಅವರು 13ನೇ ಘಟಿಕೋತ್ಸವ ಸಮಾರಂಭದ ಕುರಿತು ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24ನೇ ಸಾಲಿನ 13ನೇ ವಾರ್ಷಿಕ ಘಟಿಕೋತ್ಸವ ಗುರುವಾರ ಸೆ.4ರಂದು ಬೆಳಗ್ಗೆ 11 ಗಂಟೆಗೆ ವಿವಿ ಆವರಣದಲ್ಲಿ ನಡೆಯಲಿದೆ.

ಡಾ.ವಸುಂಧರಾ ಭೂಪತಿ, ಬಿಕೆಜಿ ನಾಗನಗೌಡ, ಉದ್ಯಮಿ ಇರ್ಫಾನ್ ರಜಾಕ್‌ಗೆ ಗೌರವ ಡಾಕ್ಟರೇಟ್

59 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭಾಗಿಕನ್ನಡಪ್ರಭವಾರ್ತೆ ಬಳ್ಳಾರಿ

ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24ನೇ ಸಾಲಿನ 13ನೇ ವಾರ್ಷಿಕ ಘಟಿಕೋತ್ಸವ ಗುರುವಾರ ಸೆ.4ರಂದು ಬೆಳಗ್ಗೆ 11 ಗಂಟೆಗೆ ವಿವಿ ಆವರಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕುಲಪತಿ ಪ್ರೊ. ಎಂ.ಮುನಿರಾಜು, ವೈದ್ಯಕೀಯ ಕ್ಷೇತ್ರದ ಸಾಧಕಿ ಸಂಡೂರು ತಾಲೂಕಿನ ಡಾ. ವಸುಂಧರಾ ಭೂಪತಿ, ಉದ್ಯಮಿಗಳಾದ ಬಾವಿಹಳ್ಳಿ ನಾಗನಗೌಡ ಹಾಗೂ ಪ್ರೆಸ್ಟೀಜ್ ಗ್ರೂಫ್‌ನ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ಅವರಿಗೆ ಗೌರವ ಡಾಕ್ಟರೇಟ್ ಹಾಗೂ 59 ಸಂಶೋಧನಾ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವ ರಾಜ್ಯಪಾಲ ಥಾವರಚಂದ ಗೆಹಲೋತ್‌ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದರು.

ನವದೆಹಲಿಯ ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್ ನ ನಿರ್ದೇಶಕ ಪ್ರೊ.ಅವಿನಾಶ್ ಚಂದ್ರ ಪಾಂಡೆ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಹಾಗೂ ವಿವಿ ಸಮ-ಕುಲಾಧಿಪತಿ ಡಾ. ಎಂ.ಸಿ.ಸುಧಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕುಲಸಚಿವರಾದ ಸಿ.ನಾಗರಾಜು ಹಾಗೂ ಪ್ರೊ. ಎನ್.ಎಂ.ಸಾಲಿ ಸುದ್ದಿಗೋಷ್ಠಿಯಲ್ಲಿದ್ದರು.

ಚಿನ್ನ ಪಡೆದ ವಿದ್ಯಾರ್ಥಿಗಳು:

ವಾಣಿಜ್ಯಶಾಸ್ತ್ರ ವಿಭಾಗದ ಹಂಸ ಎನ್. 4 ಚಿನ್ನದ ಪದಕ, ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ರಾಜೇಶ್ವರಿ 3 ಚಿನ್ನದ ಪದಕ, ಭೌತಶಾಸ್ತ್ರ ವಿಭಾಗದ ಮನೋಜ್, ರಸಾಯನಶಾಸ್ತ್ರ ವಿಭಾಗದ ಸುಹಾನ ತಸ್ಲೀಮ್, ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಶಿಲ್ಪಾ, ಬಿಬಿಸಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಮತ್ತು ವೀರಶೈವ ಮಹಾವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿ ಮಹಮ್ಮದ್ ನಕೀಬಲಿ ತಲಾ 2 ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ವಿಶ್ವವಿದ್ಯಾಲಯದ ಸ್ನಾತಕ ಪದವಿಯಲ್ಲಿ ಒಟ್ಟು 19,179 ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಪದವಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 1,845 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಘಟಿಕೋತ್ಸವದ ವಿಶೇಷತೆಯೆಂದರೆ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ವಿವಿಧ ವಿಭಾಗಗಳ 59 ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯುವರು. ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ಸೇರಿದಂತೆ ಒಟ್ಟು 155 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ.

ಗೌರವ ಡಾಕ್ಟರೇಟ್ ಪುರಸ್ಕೃತರ ಪರಿಚಯ

ಇರ್ಫಾನ್ ರಜಾಕ್:

ಇರ್ಫಾನ್ ರಜಾಕ್ ಮೂಲತಃ ಬೆಂಗಳೂರಿನವರು. ಪ್ರತಿಷ್ಠಿತ ಪ್ರೆಸ್ಟೀಜ್ ಗ್ರೂಪ್‌ನ ಗೌರವಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಮ್ಮ ಉದ್ಯಮಶೀಲತೆ ಹಾಗೂ ಸಮಾಜಮುಖಿ ಸೇವೆಗಾಗಿ ಖ್ಯಾತಿ ಪಡೆದಿದ್ದಾರೆ. ನಾಲ್ಕು ದಶಕಗಳ ವಾಣಿಜ್ಯ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಹೂಡಿಕೆ ನಡೆಸಿ ನಾಡಿನ ಖ್ಯಾತ ಉದ್ಯಮಿಗಳಾಗಿ ಮುನ್ನಡೆದಿದ್ದಾರೆ.

ಡಾ. ವಸಂಧರಾ ಭೂಪತಿ:

ಡಾ. ವಸಂಧರಾ ಭೂಪತಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದವರು. ತಮ್ಮ ವಿಶಿಷ್ಟ ವೈದ್ಯಕೀಯ ಸೇವೆ, ಸಾಹಿತ್ಯ, ಸಮಾಜಸೇವೆ ಮತ್ತು ಪತ್ರಿಕಾ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಆರೋಗ್ಯ ಶಿಬಿರ, ವೈದ್ಯಕೀಯ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಸಾಧನೆಗೈದಿದ್ದಾರೆ. 65ಕ್ಕೂ ಹೆಚ್ಚು ಆರೋಗ್ಯ ಕೃತಿಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿವೆ.

ಬಾವಿಹಳ್ಳಿ ನಾಗನಗೌಡ:

ಗಣಿ ಉದ್ಯಮಿ ಬಾವಿಹಳ್ಳಿ ನಾಗನಗೌಡ ಬಳ್ಳಾರಿ ಜಿಲ್ಲೆ ಸಂಡೂರಿನವರು. ಬಿಕೆಜಿ ಫೌಂಡೇಶನ್ ಮೂಲಕ ಶಿಕ್ಷಣ ಅಭಿವೃದ್ಧಿ, ಸಾಮಾಜಿಕ ಸೇವೆ ಮತ್ತು ಸಾಹಿತ್ಯ-ಸಾಂಸ್ಕೃತಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗಣಿ ಉದ್ಯಮದಲ್ಲಿ ಮುನ್ನಲೆಗೆ ಬಂದು ಯಶಸ್ವಿ ಉದ್ಯಮಿ ಎನಿಸಿದ್ದಾರೆ. ಆರೋಗ್ಯ ಶಿಬಿರಗಳ ಮೂಲಕ ಕ್ಷಯರೋಗಿಗಳ ಚಿಕಿತ್ಸೆಗೆ ಶ್ರಮಿಸಿದ್ದಾರೆ. ಸಮಾಜಮುಖಿ ಕೆಲಸಗಳ ಮೂಲಕ ಸಮುದಾಯಕ್ಕೆ, ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಕೊಡುಗೆ ನೀಡಿದ್ದಾರೆ.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ