ದುಗ್ಗಳ ಸದಾನಂದ
ಕೊಡಗು ಜಿಲ್ಲೆಯಲ್ಲಿ ಕಕ್ಕಡ ತಿಂಗಳ 18ನೇ ದಿನ ವಿಶೇಷ ಹಬ್ಬದ ದಿನ. ಈ ಹಬ್ಬವು ಈ ಬಾರಿ ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಆ.3ರಂದು ಆಚರಿಸಲಾಗುತ್ತಿದೆ.
ಕಕ್ಕಡ ಪದಿನೆಟ್ ಹಾಗೂ ತುಳು ಭಾಷಿಕರ ಆಟಿಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಗುತ್ತದೆ. ಕನ್ನಡದಲ್ಲಿ ಬಳಕೆಯಲ್ಲಿರುವ ಆಷಾಢ ಎಂಬ ಪದವೇ ಕೊಡವರ ಕಕ್ಕಡ ಹಾಗೂ ತುಳು ಭಾಷಿಕರ ಆಟಿ ಆಚರಣೆಯಾಗಿದೆ.ಈ ತಿಂಗಳಲ್ಲಿ ಮದ್ದು ಸೊಪ್ಪಿನಿಂದ ತಯಾರಿಸಿದ ತಿನಿಸುಗಳಿಗೆ ವಿಶೇಷ ಬೇಡಿಕೆ. ಏಕೆಂದರೆ ಈ ತಿಂಗಳಲ್ಲಿ ಮದ್ದು ಸೊಪ್ಪು ಎನ್ನುವ ಸಸ್ಯದಲ್ಲಿ 18 ತರಹದ ಔಷಧ ತುಂಬಿರುತ್ತದೆ ಎಂಬ ನಂಬಿಕೆ. ಕಾಡಿನಲ್ಲಿ, ಬರೆ ಅಂಚುಗಳಲ್ಲಿ ಬೆಳೆಯುವ ಈ ಔಷಧೀಯ ಗಿಡ ಕಕ್ಕಡದ 18ನೇ ದಿನದಂದು ಸುವಾಸನೆಯನ್ನು ಬೀರುತ್ತದೆ.
ಈ ಸೊಪ್ಪನ್ನು ಕೊಯ್ದು ತಂದು ತೊಳೆದು ಪಾತ್ರೆಯಲ್ಲಿ ನೀರನ್ನು ಸೇರಿಸಿ ಬೇಯಿಸಿದರೆ ಸಿಗುವ ಕಡುನೇರಳೆ, ನೀಲಿ ಬಣ್ಣಯುಕ್ತ ನೀರಿನಿಂದ ಅಕ್ಕಿಪಾಯಸ, ಹಿಟ್ಟು ಹೀಗೆ ಬಗೆ ಬಗೆಯ ಖಾದ್ಯ ಪದಾರ್ಥಗಳನ್ನು ತಯಾರಿಸುತ್ತಾರೆ. ಪಾಯಸಕ್ಕೆ ತೆಂಗಿನ ಕಾಯಿ ಮತ್ತು ತುಪ್ಪವನ್ನು ಹಾಕಿ, ಜೇನು ಸೇರಿಸಿ ತಿನ್ನುವದು ರೂಢಿ. ಇದರ ಮೂಲ ಉದ್ದೇಶ ಸಿಹಿಯೊಂದಿಗೆ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಚಳಿಯಿಂದ ರಕ್ಷಿಸುವುದಾಗಿದೆ. ಪಾಯಸ ಸೇವಿಸಿ ಒಂದು ಗಂಟೆಯ ನಂತರ ಮೂತ್ರ ವಿಸರ್ಜಿಸಿದರೆ ಆ ಮೂತ್ರದ ಬಣ್ಣ ಕಡುನೇರಳೆ ಬಣ್ಣದಿಂದ ಕೂಡಿರುತ್ತದೆ.
ಈ ಆಚರಣೆಯ ಅಂಗವಾಗಿ ಇತ್ತೀಚಿಗೆ ವಿವಿಧ ಜನಾಂಗದವರು ತಿಂಗಳ ಒಂದು ದಿನದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಎಲ್ಲರೂ ಒಟ್ಟುಗೂಡಿ ಹಬ್ಬದಂತೆ ಆಚರಿಸುತ್ತಾರೆ. ಈ ಹಬ್ಬದಲ್ಲಿ ವಿಶೇಷ ತಿನಿಸುಗಳ ಪ್ರದರ್ಶನ, ಸ್ಪರ್ಧೆ ಇರುತ್ತದೆ. ಎಲ್ಲವೂ ಮಳೆಗಾಲದಲ್ಲಿ ಲಭ್ಯವಿರುವ ವಸ್ತುಗಳಿಂದ ತಯಾರಿಸಿದ ಖಾದ್ಯಗಳೇ ಆಗಿರುತ್ತವೆ.