ರಮೇಶ್ ಬಿದರಕೆರೆ
ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ನಡುವೆ ಇಂದು ಮದ್ಯಾಹ್ನ 12 ಗಂಟೆಗೆ ನೆರವೇರಲಿದೆ. ನೂರಾರು ವರ್ಷಗಳ ಇತಿಹಾಸವಿರುವ ತೇರುಮಲ್ಲೇಶ್ವರ ಸ್ವಾಮಿಗೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ವಿಶೇಷ ಜ.24 ರಂದು ಕಂಕಣೋತ್ಸವದೊಂದಿಗೆ ಜಾತ್ರೆ ಆರಂಭವಾಗಿ ಫೆ.7ರ ಕಂಕಣ ವಿಸರ್ಜನೆವರೆಗೆ ಸುಮಾರು 15 ದಿನಗಳ ಕಾಲ ಸಾವಿರಾರು ಭಕ್ತರು ಪ್ರತಿನಿತ್ಯವೂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಾಶಿಯಲ್ಲಿರುವಂತೆ ತೇರುಮಲ್ಲೇಶ್ವರ ದೇವಸ್ಥಾನದಲ್ಲಿಯೂ ಮೂಲ ವಿಗ್ರಹದ ಮುಖ ದಕ್ಷಿಣಕ್ಕೆ ಇರುವುದರಿಂದ ಈ ದೇವಸ್ಥಾನವನ್ನು ದಕ್ಷಿಣಕಾಶಿ ಎನ್ನಲಾಗುತ್ತದೆ.
*ತೇರು ಮಲ್ಲೇಶ್ವರ ದೇವಾಲಯದ ಹಿನ್ನೆಲೆ: ಪರಮ ಶಿವ ಭಕ್ತೆಯಾದ ಹೇಮರೆಡ್ಡಿ ಮಲ್ಲಮ್ಮಳು ಈ ಊರಿನಲ್ಲಿ ವಾಸಿಸುತ್ತಿದ್ದಳು. ಶಿವನ ಪರಮ ಭಕ್ತೆಯಾದ ಕಾರಣ ಅವಳು ಪ್ರತಿ ವರ್ಷವೂ ಚಾಚೂ ತಪ್ಪದೆ ಶ್ರೀ ಶೈಲಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆದು ಬರುತ್ತಿದ್ದಳು. ಕಾಲ್ನಡಿಗೆಯಲ್ಲಿಯೇ ಹಿರಿಯೂರಿನಿಂದ ಶ್ರೀ ಶೈಲಕ್ಕೆ ಹೋಗಿ ಬರುತ್ತಿದ್ದ ಮಲ್ಲಮ್ಮಳಿಗೆ ವಯಸ್ಸಾದಂತೆ ದೇಹದ ಶಕ್ತಿಯು ಕುಗ್ಗಿತು. ಒಮ್ಮೆ ಶ್ರೀ ಶೈಲಕ್ಕೆ ಹೋಗಿ ಚೆನ್ನಮಲ್ಲಿಕಾರ್ಜುನನ ದರ್ಶನ ಪಡೆದು ಮರಳಿ ಬರುವಾಗ ದಾರಿಯಲ್ಲಿನ ಒಂದು ಕಲ್ಲು ತೆಗೆದುಕೊಂಡು ಎಲೆ ಅಡಿಕೆ ಕುಟ್ಟಿ ಹಾಕಿಕೊಂಡು ಆ ಕಲ್ಲನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗುತ್ತಾಳೆ. ಸ್ವಲ್ಪ ದೂರದ ನಂತರ ಮತ್ತೆ ಎಲೆ ಅಡಿಕೆ ಹಾಕಿಕೊಳ್ಳಲು ಕುಳಿತಾಗ ಪಕ್ಕದಲ್ಲಿ ಅದೇ ಕಲ್ಲು. ಮೊದಲ ಸ್ಥಳದಲ್ಲಿಯೇ ಎಸೆದು ಬಂದಿದ್ದ ಕಲ್ಲು ಮತ್ತೆ ಪಕ್ಕದಲ್ಲಿ ಇದ್ದದ್ದನ್ನು ನೋಡಿ ಆಶ್ಚರ್ಯವಾಗಿ ಎಲೆ ಅಡಿಕೆ ಅದೇ ಕಲ್ಲಿನಿಂದ ಕುಟ್ಟಿಕೊಂಡು ಕಲ್ಲನ್ನು ದೂರ ಎಸೆದು ಹಿರಿಯೂರು ಬಂದು ಸೇರುತ್ತಾಳೆ. ಮನೆಗೆ ಬಂದ ಮೇಲೆ ಮತ್ತೆ ಎಲೆ ಅಡಿಕೆ ಚೀಲದಲ್ಲಿ ಅದೇ ಕಲ್ಲು ಪ್ರತ್ಯಕ್ಷವಾಗಿದ್ದನ್ನು ನೋಡಿ ಆಶ್ಚರ್ಯಗೊಂಡ ಮಲ್ಲಮ್ಮ ಆ ಕಲ್ಲನ್ನು ಚೀಲದಿಂದ ತೆಗೆದು ಕಡೆಗಿಟ್ಟಳು. ಆ ಕಲ್ಲು ಉರುಳುತ್ತಾ ಹೋಗಿ ಒರಳು ಕಲ್ಲಿನಲ್ಲಿ ಸೇರಿಕೊಂಡಿತು. ಅಂದು ರಾತ್ರಿ ಮಲ್ಲಮ್ಮನ ಕನಸಿನಲ್ಲಿ ಚೆನ್ನಮಲ್ಲಿಕಾರ್ಜುನ ಬಂದು ನಾನಿನ್ನು ಇಲ್ಲಿಯೇ ನೆಲೆಸುತ್ತೇನೆ.ಇನ್ನು ಮುಂದೆ ಇಲ್ಲಿಯೇ ಪೂಜಿಸು ಎಂದು ಮಾಯವಾದನಂತೆ. ಅಂದಿನಿಂದ ಹೇಮರೆಡ್ಡಿ ಮಲ್ಲಮ್ಮ ಅದೇ ಕಲ್ಲಿಗೆ ಪೂಜೆ ಮಾಡುತ್ತಾ ಅದು ಲಿಂಗದ ರೂಪ ಪಡೆಯುತ್ತದೆ ಮತ್ತು ದೇವಾಲಯವೇ ನಿರ್ಮಾಣವಾಗುತ್ತದೆ.1446 ರಲ್ಲಿ ಪಾಳೇಗಾರ ಕೆಂಚಪ್ಪನಾಯಕ ದೇವಾಲಯ ನಿರ್ಮಿಸಿದನು ಎನ್ನಲಾಗಿದ್ದು, ದೇವಾಲಯದ ಗೋಪುರವು ದ್ರಾವಿಡ ಶೈಲಿಯಲ್ಲಿದ್ದು 45 ಅಡಿ ಎತ್ತರವಿದೆ. ದೇವಾಲಯದ ಮುಖ ಮಂಟಪವನ್ನು ಮೂರು ಕಡೆ ಪ್ರವೇಶಿಸಬಹುದಾಗಿದೆ. ಮುಖ ಮಂಟಪದ ಹೊರಮೈ ಮೇಲ್ಗಡೆ ಶ್ರೀ ಕೃಷ್ಣನು ಗೋಪಿಕಾ ಸ್ತ್ರೀಯರ ಜೊತೆ ಜಲ ಕ್ರೀಡೆಯಲ್ಲಿದ್ದಾಗ ಅವರ ವಸ್ತ್ರವನ್ನು ಕದ್ದು ಮರದ ಮೇಲೆ ಕುಳಿತ ಸನ್ನಿವೇಶವನ್ನು ತೋರಿಸುವ ವಿಗ್ರಹಗಳಿವೆ. ಮುಖ ಮಂಟಪದ ಒಳಮೈಯ ಮೇಲೆ ಕಿರಾತಾರ್ಜುನೀಯ, ಗಿರಿಜಾ ಕಲ್ಯಾಣ, ಶಿವಪುರಾಣ,ಗೋಕರ್ಣಗಳ ಮಹಿಮೆಗೆ ಸಂಬಂಧಪಟ್ಟ ಜಲವರ್ಣ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. ಮುಖ ಮಂಟಪದ ಎದುರು ಸುಮಾರು 45 ಅಡಿ ಎತ್ತರವಾದ ಶಿಲೆಯ ಸ್ಥoಭವಿದೆ.ಈ ದೀಪಸ್ಥoಭದ ಮೇಲೆ ಪ್ರತಿ ದಿಕ್ಕಿಗೆ ಎರಡೆರಡರಂತೆ 8 ಲೋಹದ ಹಣತೆಯಾಕಾರದ ದೀಪಗಳಿವೆ. ಹಣತೆಯು ಸುಮಾರು 10 ಸೇರು ಎಣ್ಣೆ ಹಿಡಿಯುವಷ್ಟು ಅಗಲವಾಗಿದೆ. ವರ್ಷಕ್ಕೊಮ್ಮೆ ಜಾತ್ರೆಯ ಸಂದರ್ಭದಲ್ಲಿ ಇಲ್ಲಿ ದೀಪ ಹಚ್ಚಿ ಕರ್ಪೂರದಾರತಿ ಕಾರ್ಯಕ್ರಮ ನಡೆಸಲಾಗುತ್ತದೆ. ಸಾವಿರಾರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇಂದು ಮದ್ಯಾಹ್ನ 12ಕ್ಕೆ ಐಮಂಗಲ ಹೋಬಳಿ ಬೀರೇನಹಳ್ಳಿ ಮಜುರೆಯ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಮಘಾ ನಕ್ಷತ್ರದಲ್ಲಿ ಶಿವಧನುಸ್ಸಿಗೆ ಗಂಗಾ ಸ್ನಾನದ ನಂತರ ಬ್ರಹ್ಮ ರಥೋತ್ಸವ ನಡೆಯಲಿದ್ದು ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಸೇರುತ್ತಾರೆ.
ರಸ್ತೆಯುದ್ಧಕ್ಕೂ ಈಗಾಗಲೇ ದೀಪಾಲಂಕಾರ
ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ಪ್ರತಿ ವರ್ಷದ ಜಾತ್ರೆಗಿಂತ ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬರುವ ಸಾವಿರಾರು ಭಕ್ತಾಧಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಸ್ವಾಮಿಯ ಜಾತ್ರೆ ವೀಕ್ಷಿಸಲು ಬರುವ ಭಕ್ತಾಧಿಗಳಿಗೆ ದರ್ಶನ ವ್ಯವಸ್ಥೆಗೆ ತೊಡಕಾಗದಂತೆ ಪೊಲೀಸ್ ಇಲಾಖೆ ಗಮನ ಹರಿಸಲಿದೆ. ಪ್ರಧಾನ ರಸ್ತೆಯುದ್ಧಕ್ಕೂ ಈಗಾಗಲೇ ದೀಪಾಲಂಕಾರ ಮಾಡಲಾಗಿದೆ. ಮುಖ್ಯವಾಗಿ ನಗರಸಭೆಯವರ ಸಹಕಾರದಿಂದ ಸ್ವಚ್ಛತೆಗೆ ಆದ್ಯತೆ ನೀಡಿ ಯಾವುದೇ ಲೋಪವಾಗದಂತೆ ಎಲ್ಲರ ಸಹಕಾರದೊಂದಿಗೆ ಜಾತ್ರೆ ನಡೆಸಲಾಗುವುದು.