ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ. ವರ್ಧಂತ್ಯುತ್ಸವದ ಅಂಗವಾಗಿ ಬೆಳಗ್ಗೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಲಿದೆ.ಈ ಸಂದರ್ಭದಲ್ಲಿ, ನಾಡಿನಾದ್ಯಂತ ಧಾರ್ಮಿಕ ಕ್ಷೇತ್ರಗಳ ಮುಖಂಡರು, ನಾಡಿನ ಗಣ್ಯರು, ಕ್ಷೇತ್ರದ ನೌಕರವೃಂದ, ಭಕ್ತರು, ಊರಿನ ನಾಗರಿಕರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸಂಸ್ಥೆಯವರು, ಸರ್ಕಾರಿ ಅಧಿಕಾರಿಗಳು, ದೂರ-ಪರವೂರ ನಾಗರಿಕರು, ಕ್ಷೇತ್ರಕ್ಕೆ ಬಂದು ಹೆಗ್ಗಡೆಯವರಿಗೆ ಭಕ್ತಿಪೂರ್ವಕ ಅಭಿನಂದನೆಗಳನ್ನು, ಗೌರವಾರ್ಪಣೆಯನ್ನು ಸಲ್ಲಿಸಲಿದ್ದಾರೆ.
1968ರ ಅ. 24ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಐದು ದಶಕಗಳಿಗೂ ಮೀರಿದ ತಮ್ಮ ಸೇವಾ ಪಯಣದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.ಶ್ರೀ ಕ್ಷೇತ್ರದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಚರ್ತುವಿಧ ದಾನ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದಾರಲ್ಲದೆ, ಕಾಲದ ಅಗತ್ಯತೆಗೆ ಅನುಗುಣವಾಗಿ ಈ ಪರಂಪರೆಗೆ ಹೊಸ ದಿಕ್ಕನ್ನು ನೀಡಿದವರು. ಶ್ರೀ ಕ್ಷೇ ಧ.ಗ್ರಾ. ಯೋಜನೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಜನಜಾಗೃತಿ ವೇದಿಕೆ ಕಾರ್ಯಕ್ರಮಗಳು, ಆರೋಗ್ಯ ಸುರಕ್ಷಾ ಮತ್ತು ನೈರ್ಮಲ್ಯ ಯೋಜನೆಗಳು, ಪರಿಸರ ಸಂಬಂಧಿತ ಕಾರ್ಯಕ್ರಮಗಳು, ಕೆರೆಗಳ ಪುನಶ್ವೇತನ, ಪ್ರಗತಿ ಬಂಧು, ಸ್ವಸಹಾಯ ಸಂಘಗಳು, ರುಡ್‌ಸೆಟ್, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಪ್ರೋತ್ಸಾಹ, ಶಾಂತಿವನ ಟ್ರಸ್ಟ್ ಮೂಲಕ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನ, ಧರ್ಮೋತ್ಥಾನ ಟ್ರಸ್ಟ್ ಮೂಲಕ ರಾಜ್ಯ ಹಾಗೂ ಹೊರ ರಾಜ್ಯದ ನೂರಾರು ದೇವಸ್ಥಾನ, ಬಸದಿ, ಸ್ಮಾರಕಗಳನ್ನು ಶಾಸ್ತ್ರ ಬದ್ಧವಾಗಿ ನವೀಕರಿಸಲಾಗಿದೆ. ಭಜನಾ ತರಬೇತಿ ಕಮ್ಮಟಗಳು, ಯಕ್ಷಗಾನ ತರಬೇತಿ, ಮಂಜೂಷಾ ವಸ್ತು ಸಂಗ್ರಹಾಲಯ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಮೊದಲಾದ ಸಂಸ್ಥೆಗಳ ಮೂಲಕ ಸಂಸ್ಕೃತಿ ರಕ್ಷಣೆಯ ಕಾರ್ಯವೂ ನಡೆಯುತ್ತಿದೆ. ರುದ್ರಭೂಮಿಗಳ ಅಭಿವೃದ್ಧಿಯಂತಹ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಪ್ರತಿ ವರ್ಷ ಧರ್ಮಸ್ಥಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡ ಕುಟುಂಬಗಳಿಗೆ ಆಧಾರವಾಗಿದ್ದು, ಅನೇಕ ಸಂಘ-ಸಂಸ್ಥೆಗಳು ಧರ್ಮಸ್ಥಳದ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಲ್ಲಿ ಸೇರಿ ಮದ್ಯಮುಕ್ತರಾಗಿರುವ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ತಂಡ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಕಾಲೇಜು, ಕಾನೂನು ಕಾಲೇಜುಗಳು ನಡೆಯುತ್ತಿದೆ. ತಮ್ಮ ಸಂಸ್ಥೆಗಳ ಮೂಲಕ ಈಗಾಗಲೇ ಮೂರು ಗಿನ್ನಿಸ್ ದಾಖಲೆಗಳನ್ನು ಕೂಡ ಮಾಡಲಾಗಿದೆ.ಸೇವೆಯನ್ನೇ ಜೀವನದ ಧ್ಯೇಯವಾಗಿರಿಸಿಕೊಂಡಿರುವ ಹೆಗ್ಗಡೆ ತಮ್ಮ ಸರಳತೆ, ದೂರದೃಷ್ಟಿ ಹಾಗೂ ಜನಪರ ಕಾರ್ಯಗಳ ಮೂಲಕ ನಾಡಿನಾದ್ಯಂತ ಅಪಾರ ಜನಮನ್ನಣೆ, ಪ್ರೀತಿ, ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಪಟ್ಟಾಭಿಷೇಕದ ವರ್ಧಂತ್ಯುತ್ಸವವು ಅವರ ಸೇವಾ ಸಾಧನೆಗಳನ್ನು ಸ್ಮರಿಸುವ ಹಾಗೂ ಮುಂದಿನ ಜನಸೇವೆಯ ಸಂಕಲ್ಪವನ್ನು ನವೀಕರಿಸುವ ಮಹತ್ವದ ಸಂದರ್ಭವಾಗಿದೆ.
ಡಾ.ಹೆಗ್ಗಡೆ ನೇತೃತ್ವದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಕ್ಷೇತ್ರವಾಗಿ ಜನಮನ್ನಣೆಗೆ ಪಾತ್ರರಾಗಿದೆ. ಸ್ವಚ್ಚ ಧಾರ್ಮಿಕ ಕ್ಷೇತ್ರ ಎಂಬ ಹಿರಿಮೆಗೂ ಪಾತ್ರರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಈ ಎಲ್ಲಾ ಜನೋಪಯೋಗಿ ಕಾರ್ಯಕ್ರಮಗಳು ಅಪಾರ ಜನಮನ್ನಣೆ ಹಾಗೂ ಹಿರಿಮೆಗೆ ಪಾತ್ರವಾಗಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾಗಳೊಂದಿಗೆ, ಡಾ.ಹೆಗ್ಗಡೆಯವರಿಗೆ ಪದ್ಮ ವಿಭೂಷಣ ಗೌರವವನ್ನು ತಂದು ಕೊಟ್ಟಿದೆ. ಪ್ರಸ್ತುತ ಅವರು ರಾಜ್ಯಸಭಾಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.