ಕನ್ನಡಪ್ರಭ ವಾರ್ತೆ ವಿಜಯಪುರ ಇಂದಿನ ಯಶಸ್ಸು ಪದವಿಗಳ ಮೂಲಕ ಮಾತ್ರ ನಿರ್ಧಾರವಾಗುವುದಿಲ್ಲ. ಅದು ಕೌಶಲ್ಯ ಮತ್ತು ಹೊಂದಾಣಿಕೆ ಮೇಲೆ ಅವಲಂಬಿತವಾಗಿದೆ ಎಂದು ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಪ್ರತಿಪಾದಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಇಂದಿನ ಯಶಸ್ಸು ಪದವಿಗಳ ಮೂಲಕ ಮಾತ್ರ ನಿರ್ಧಾರವಾಗುವುದಿಲ್ಲ. ಅದು ಕೌಶಲ್ಯ ಮತ್ತು ಹೊಂದಾಣಿಕೆ ಮೇಲೆ ಅವಲಂಬಿತವಾಗಿದೆ ಎಂದು ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಪ್ರತಿಪಾದಿಸಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ತಂತ್ರಜ್ಞಾನ ದಕ್ಷತೆಯನ್ನು ಮಾನವೀಯ ಸಂವೇದನೆಯೊಂದಿಗೆ ಸಂಯೋಜಿಸ ಬಲ್ಲವರಿಗೆ ಭವಿಷ್ಯವಿದೆ. ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ಜೀವನಪೂರ್ತಿ ಕಲಿಕೆ ಇಂದಿನ ಯಶಸ್ಸಿನ ಮೂಲ ಅಂಶಗಳಾಗಿವೆ. ಕೃತಕ ಬುದ್ಧಿಮತ್ತೆಯಿಂದ ರೂಪುಗೊಳ್ಳುತ್ತಿರುವ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಎಐ ಉದ್ಯಮಗಳನ್ನು ಪರಿವರ್ತಿಸುತ್ತಿದ್ದು, ಉದ್ಯೋಗಗಳನ್ನು ಮರು ಪರಿಭಾಷಿಸುತ್ತಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ತಂತ್ರಜ್ಞಾನವು ಮುಂದುವರಿದರೂ, ಮಾನವೀಯ ಮೌಲ್ಯಗಳು, ನೈತಿಕ ಚಿಂತನೆ, ಸೃಜನಶೀಲತೆ ಮತ್ತು ಸಹಾನುಭೂತಿ ಮುಂತಾದ ಈ ಮೌಲ್ಯಗಳು ಸದಾ ಸ್ಥಿರವಾಗಿರುತ್ತವೆ. ದೇಶ ವಿಕಸಿತ ಭಾರತ- 2047 ಎಂಬ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ, ಶಿಕ್ಷಣ ಪಡೆದ ಮತ್ತು ಸಬಲಗೊಂಡ ಮಹಿಳೆಯರ ಪಾತ್ರ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯವಾಗುತ್ತದೆ. ಶಿಕ್ಷಣ ಪಡೆದ ಮಹಿಳೆಯರು, ಆರ್ಥಿಕವಾಗಿ ಸ್ವಾವಲಂಬಿ ಮಹಿಳೆಯರಾಗುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ನಾಯಕತ್ವ. ಮಹಿಳೆಯರು ಅಭಿವೃದ್ಧಿಯಾದರೆ ರಾಷ್ಟ್ರವೂ ಅಭಿವೃದ್ಧಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯ ಮತ್ತು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳು ಸಮಾನ ಉದ್ದೇಶ ಹೊಂದಿವೆ. ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಹಾಗೂ ಅವರನ್ನು ನಾಯಕಿಯರಾಗಿ ಮತ್ತು ಬದಲಾವಣೆಯ ಸಾರಥಿಗಳಾಗಿ ರೂಪಿಸುವುದು ಈ ಎರಡೂ ವಿಶ್ವವಿದ್ಯಾನಿಲಯಗಳ ಪ್ರಮುಖ ಉದ್ದೇಶವಾಗಿದೆ. ಪದವೀಧರರಾಗಿ ಹೊರ ಬರುತ್ತಿರುವ ನಿಮಗೆ ಜ್ಞಾಪಕದಲ್ಲಿರಲಿ- ಕಲಿಕೆ ಇಲ್ಲಿಗೆ ಅಂತ್ಯಗೊಳ್ಳುವುದಿಲ್ಲ. ಇದು ಜೀವನ ಪೂರ್ತಿ ನಡೆಯುವ ಪ್ರಯಾಣ. ಮುಂದಿನ ದಿನಗಳಲ್ಲಿ ನೀವು ವೃತ್ತಿಪರ, ವೈಯಕ್ತಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಸವಾಲುಗಳು ಅಡ್ಡಿಗಳು ಅಲ್ಲ, ಅವು ನಿಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿಸುವ ಅವಕಾಶಗಳು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ದೃಢವಾಗಿರಿ. ನಿಮ್ಮ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜಿಸಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ವೇದಿಕೆಯ ಮೇಲೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಕಟ್ಟಿಮನಿ ಮತ್ತು ಆಶಾದೇವಿ ಗುಡಗುಂಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಉಪಸ್ಥಿತರಿದ್ದರು.
ನೀವು ಈ ವಿಶ್ವವಿದ್ಯಾನಿಲಯವನ್ನು ಬಿಟ್ಟು ಹೋಗುವಾಗ, ಅಕ್ಕಮಹಾದೇವಿಯವರ ಧೈರ್ಯ, ಜ್ಞಾನ ಮತ್ತು ನಿರ್ಭಯ ಸ್ವಾತಂತ್ರ‍್ಯದ ಆತ್ಮವನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಭವಿಷ್ಯ ರೂಪಿಸುವುದು ನಿಮ್ಮ ಕೈಯಲ್ಲಿದೆ. ಆತ್ಮವಿಶ್ವಾಸದೊಂದಿಗೆ ಮುಂದುವರಿಯಿರಿ. ಉದ್ದೇಶಪೂರ್ಣವಾಗಿ ನಡೆದುಕೊಳ್ಳಿ. ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಿಮ್ಮ ಕೊಡುಗೆ ನೀಡಿ.
- ಪ್ರೊ.ಉಜ್ವಲಾ ಚಕ್ರದೇವ್, ಕುಲಪತಿ, ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.