ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ಸುಮಾರು ಮೂರು ತಿಂಗಳಿನಿಂದ ತಾಲೂಕು ಕಸಬಾ ಹೋಬಳಿ ತೊಗರಿ ಮತ್ತು ಶೇಂಗಾ ಬೆಳೆಗಾರರ ಸಂಘ ಈಗಾಗಲೇ ಬೆಳೆ ವಿಮೆ ಪಾವತಿಸಿರುವ ತೊಗರಿ ಬೆಳೆಗಾರರಿಗೆ ಬೆಳೆ ಪರಿಹಾರ ನೀಡಬೇಕು. ತೊಗರಿ ಕಟಾವು ಸಮೀಕ್ಷೆ ನಡೆಸಿ ಬೆಳೆಗಾರರಿಗೆ ಯಾವುದೇ ಅನ್ಯಾಯವಾಗದಂತೆ ಮಧ್ಯಂತರ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಬೆಳೆಗಾರರ ಸಂಘದ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಸಿ.ಶಿವಲಿಂಗಪ್ಪ ಅಧ್ಯಕ್ಷತೆಯಲ್ಲಿ ನಿರಂತರ ಹೋರಾಟ ನಡೆಸುತ್ತ ಬಂದಿದ್ದು, ಜಿಲ್ಲಾಡಳಿತ ಕೊನೆಗೂ ತೊಗರಿ ಕಟಾವು ಸಮೀಕ್ಷೆ ನಡೆಸಲು ಇತ್ತೀಚಿಗಷ್ಟೇ ಅನುಮತಿ ನೀಡಿತ್ತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಹಿರಿಯೂರು ಎಡಿಎ ಜೆ.ಅಶೋಕ್, ಓರಿಯೆಂಟಲ್ ಇನ್ಸೂರೆನ್ಸ್ ಪ್ರತಿನಿಧಿ, ಗ್ರಾಮಲೆಕ್ಕಿಗ ಕೇಶವಚಾರಿ, ಬೆಳೆಕಟಾವು ಸಮೀಕ್ಷೆ ನಡೆಸಿದರು. ಒಂದು ಕಡೆ ನಾಲ್ಕು ಕ್ವಿಂಟಾಲ್ ಬಂದರೆ, ಮತ್ತೊಂದು ಕಡೆ ಎರಡು ಕ್ವಿಂಟಲ್ ಸಿಪ್ಪೆ ಸಮೇತ ಸಮೀಕ್ಷೆ ನಡೆಸಿದಾಗ ಕಂಡು ಬಂದಿದ್ದು ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಇಲಾಖೆ ಅಧಿಕಾರಿಗಳು ಮಾತ್ರ ತೊಗರಿ ಬೆಳೆ ಕಟಾವು ಸಮೀಕ್ಷೆಯನ್ನು ಮಾಡಿ ಸಂಪೂರ್ಣ ವರದಿಯನ್ನು ಅಧಿಕಾರಿಗಳಿಗೆ ನೀಡುತ್ತೇವೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ತಾಲೂಕು ಕಸಬಾ ಹೋಬಳಿ ತೊಗರಿ, ಶೇಂಗಾ ಬೆಳೆಗಾರರ ಸಂಘದ ಅಧ್ಯಕ್ಷ ನಿವೃತ್ತ ಪ್ರೊ.ಶಿವಲಿಂಗಪ್ಪ ಮಾತನಾಡಿ, ಕಳೆದ ಮರ‍್ನಾಲ್ಕು ತಿಂಗಳಿನಿಂದ ಪ್ರತಿಭಟನೆ ನಡೆಸಿ ಮನವಿ ಮಾಡಿದರೂ ಸಹ ವಸ್ತಾಂಶವನ್ನು ಪರಿಶೀಲಿಸಲು ಯಾವ ಅಧಿಕಾರಿಯೂ ಬಂದಿಲ್ಲ. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಬೆಳೆಗಾರರ ಸಂಘ ಒಟ್ಟಾರೆ ಬೇಡಿಕೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಈಗಾಗಲೇ ಬಹುತೇಕ ಜಮೀನಿನಲ್ಲಿದ್ದ ತೊಗರಿ ಬೆಳೆಯನ್ನು ರೈತರು ಬೇಸರದಿಂದಲೇ ನಾಶಪಡಿಸಲು ಮುಂದಾಗಿದ್ದಾರೆ. ಈ ಹಿಂದೆಯೇ ತಾಲೂಕಿನಾದ್ಯಂತ ತೊಗರಿ ಬೆಳೆಗಾರರಿಗೆ ಆದ ನಷ್ಟದ ಬಗ್ಗೆ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಸಂಬಂಧಪಟ್ಟ ಕೃಷಿ ಇಲಾಖೆ ಕೂಡಲೇ ಸಮಸ್ಯೆಗೆ ಸ್ಪಂದಿಸಿದ್ದರೆ ತೊಗರಿ ಬೆಳೆಗಾರರಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಿರಿಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಸಮೀಕ್ಷೆ ಹೆಸರಿನಲ್ಲಿ ಮತ್ತೆ ನಾಟಕವಾಡಿ, ರೈತರ ಬಾಳಿಗೆ ಮುಳ್ಳಾಗುವುದು ಬೇಡ. ಸಾವಿರಾರು ರುಪಾಯಿ ಖರ್ಚು ಮಾಡಿ ರೈತ ತೊಗರಿಬೆಳೆಯುತ್ತಿದ್ದಾನೆ. ಅನೇಕ ಸಮಸ್ಯೆಗಳ ನಡುವೆಯೂ ಬೆಳೆಯನ್ನು ಸುಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮವಹಿಸಿದ್ಧಾನೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭೂಮಿಗೆ ಬೀಜ ಹಾಕಿದ್ದಾನೆ, ರೈತರ ಪರಿಶ್ರಮದ ಬಗ್ಗೆ ಸರ್ಕಾರಕ್ಕೆ ಯಾವುದೇ ಅರಿವಿಲ್ಲ. ಕೇವಲ ನಮ್ಮ ಒತ್ತಾಯ, ಬಲವಂತಕ್ಕೆ ಸಮೀಕ್ಷೆ ನಾಟಕ ನಡೆಯುತ್ತಿದೆ ಎಂದು ಅನ್ನಿಸುತ್ತಿದೆ. ಆದರೆ, ದೇಶಕ್ಕೆ ಅನ್ನ ಕೊಡುಗೆ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಸದೇ ಇರುವುದು ನೋವಿನ ಸಂಗತಿ ಎಂದರು.ಸಮೀಕ್ಷಾ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀಕಂಠಮೂರ್ತಿ, ರಾಜಣ್ಣ, ಹಿರೇಹಳ್ಳಿರ‍್ರಿಸ್ವಾಮಿ, ಆರ್.ಎ.ದಯಾನಂದಮೂರ್ತಿ, ದಿನೇಶ್‌ರೆಡ್ಡಿ, ಹಂಪಣ್ಣ, ರಾಜಣ್ಣ, ವೀರಣ್ಣ, ಎಲ್‌ಐಸಿ ತಿಪ್ಪೇಸ್ವಾಮಿ, ಸಿದ್ದೇಶ್ವರರೆಡ್ಡಿ, ಕಂದಾಯಇಲಾಖೆ ಸುರೇಶ್, ಪ್ರಕಾಶ್, ತಮ್ಮೇಗೌಡ ಮುಂತಾದವರು ಹಾಜರಿದ್ದರು. ಸಮೀಕ್ಷಾ ಸಂದರ್ಭದಲ್ಲೂ ಸಹ ಸ್ಥಳದಲ್ಲಿ ರೈತರಿಗೆ ಅಧಿಕಾರಿಗಳ ಅಳತೆ ಮತ್ತು ಸಮೀಕ್ಷೆ ಕಸಿವಿಸಿಯನ್ನುಂಟು ಮಾಡಿತು. ಕಾರಣ ಒಂದು ಕಡೆ ಸಮರ್ಪವಾಗಿ ಬೆಳೆ ಬಂದರೆ ಮತ್ತೊಂದು ಕಡೆ ಕಡಿಮೆಯಾಗಿದ್ದು ರೈತರ ಅಸಮದಾನಕ್ಕೆ ಕಾರಣವಾಯಿತು.