ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರದಿಂದ ಕಪ್ಪು ಬಣ್ಣದ ಥಾರ್‌ನಲ್ಲಿ ಸಿಂದಗಿ ಕಡೆ ಹೊರಟಿದ್ದ ವಿಜುಗೌಡಾ ಪುತ್ರ ಸಮರ್ಥಗೌಡಾ ಪಾಟೀಲ್, ಟೋಲ್‌ನಲ್ಲಿ ಹಣ ಕೇಳಿದ್ದಕ್ಕೆ ವಿಜುಗೌಡಾ ಮಗ ಎಂದು ಹೇಳಿದ್ದಾನೆ. ಯಾವ ವಿಜುಗೌಡಾ ಅಂತಾ ಸಿಬ್ಬಂದಿ ಕೇಳಿದ್ದಕ್ಕೆ ಸಮರ್ಥಗೌಡಾ ಹಾಗೂ ಆತನ ಗೆಳಯರು ಥಳಿಸಿದ್ದಾರೆ ಎನ್ನಲಾಗಿದೆ. ನಂತರ ಟೋಲ್ ಸಿಬ್ಬಂದಿ ಮಧ್ಯ ಆಗಮಿಸಿ ಗಲಾಟೆ ತಿಳಿಗೊಳಿಸಿದರು. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಗನ ಮುಂದೆ ತಂದೆಗೆ ಬೈದ್ರೆ ಸಿಟ್ಟು ಬರಲ್ವಾ?ಟೋಲ್ ಸಿಬ್ಬಂದಿ ಮೇಲೆ ಪುತ್ರನ ಹಲ್ಲೆ ವಿಚಾರವಾಗಿ ಬಿಜೆಪಿ ಮುಖಂಡ ವಿಜುಗೌಡಾ ಪಾಟೀಲ್ ಸ್ಪಷ್ಟನೆ ನೀಡಿದ್ದು, ಮಗನ ಮುಂದೆ ತಂದೆಗೆ ಬೈದ್ರೆ ಯಾರಿಗೆ ತಾನೆ ಸಿಟ್ಟು ಬರಲ್ಲ? ಟೋಲ್ ಸಿಬ್ಬಂದಿ ನನ್ನ ಮಗನ ಮುಂದೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಆಗ ನನ್ನ ಮಗನ ಜೊತೆ ಇದ್ದವರು ಸಿಬ್ಬಂದಿಗೆ ಥಳಿಸಿದ್ದಾರೆ. ನಂತರ ನನ್ನ ಮಗ ಒಂದು ಬಾರಿ ಥಳಿಸಿದ್ದಾನೆ ಎಂದು ವಿಜುಗೌಡಾ ಸ್ಪಷ್ಟಪಡಿಸಿದ್ದಾರೆ.
ನನ್ನ ಮಗ ಮಾಡಿದ್ದು ತಪ್ಪು, ಸಿಬ್ಬಂದಿ ಕೂಡ ಆ ರೀತಿ ಮಾತನಾಡಿದ್ದು ತಪ್ಪು. ಅವರು ಎಫ್ಐಆರ್ ಮಾಡಿದ್ರೆ ನಾವು ಮಾಡುತ್ತೇವೆ. ನನ್ನ ಮಗನ ಪರವಾಗಿ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಆದರೆ ಈಗ ಇದರಲ್ಲಿ ರಾಜಕೀಯ ಪ್ರವೇಶವಾಗಿದೆ. ಇದರಲ್ಲಿ ರಾಜಕಾರಣ ಬೆರೆತ ಕಾರಣ ಈ ಮಟ್ಟಕ್ಕೆ ಇದು ಬೆಳೆಯುತ್ತಿದೆ. ಇದಕ್ಕೆ ನಾವು ಸಿದ್ದರಿದ್ದೇವೆ, ಇಲ್ಲಿಗೆ ಇಬ್ಬರು ಕ್ಷಮಾಪಣೆ ಕೇಳಿ ಮುಗಿಸಿದ್ರೆ ಒಳ್ಳೆಯದು, ಇಲ್ಲವಾದ್ರೇ ನಾವು ದೂರು ಕೊಡ್ತೇವೆ ಎಂದು ತಿಳಿಸಿದ್ದಾರೆ.