ಟೊಮೆಟೋ ಬಂಪರ್‌ ಬೆಳೆ; ದರ ಕುಸಿತ, ರೈತ ಕಂಗಾಲು

KannadaprabhaNewsNetwork |  
Published : Aug 11, 2024, 01:31 AM IST
ಸಿಕೆಬಿ-1 ಟೊಮೆಟೊ ತೋಟವೊಂದರಲ್ಲಿ ಬಿಟ್ಟಿರುವ ಟೊಮೆಟೊ ಫಸಲು | Kannada Prabha

ಸಾರಾಂಶ

ಟೊಮೆಟೋ ಬೆಲೆ ಹೆಚ್ಚಳ ಕಂಡ ರೈತರು ಮತ್ತೆ ಹೆಚ್ಚಿನ ಪ್ರದೇಶದಲ್ಲಿ ಟೊಮೆಟೊ ಬೆಳೆ ಬೆಳೆದಿದ್ದರಿಂದ ಮಾರುಕಟ್ಟೆಗೆ ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ದರ ಕುಸಿಯಲು ಕಾರಣವಾಗಿದೆ. ಆದ್ದರಿಂದ ಟೊಮೆಟೊ ಬೆಳೆದ ಬೆಳೆಗಾರರು ದರ ಕುಸಿತದಿಂದ ಕಂಗಾಲಾಗುವಂತಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದ ತಿಂಗಳು ಶತಕದ ಗಡಿ ದಾಟಿ ಸದ್ದು ಮಾಡಿದ್ದ ಟೊಮೆಟೋ ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಬೆಳೆಯಿಂದಾಗಿ ಮಾರುಕಟ್ಟೆಗೆ ಹೇರಳವಾಗಿ ಬರುತ್ತಿದೆ. ಇದರಿಂದಾಗಿ ಟೊಮೆಟೋ ದರ ಕುಸಿತಕ್ಕೆ ಕಾರಣವಾಗಿದೆ. ಈಗ ಕೆಜಿಗೆ 5 ರಿಂದ 10 ರೂ.ನಂತೆ ಮಾರಾಟವಾಗುತ್ತಿದೆ. ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ಟೊಮೆಟೋ ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಕಳೆದ ವರ್ಷ ಬರಗಾಲದ ಬವಣೆಯನ್ನು ಅನುಭವಿಸಿದ್ದ ರೈತರಿಗೆ, ಗ್ರಾಹಕರಿಗೆ ಹಾಗೂ ಜನಸಾಮಾನ್ಯರಿಗೆ ತರಕಾರಿ ಬೆಳೆಗಳ ದರ ಗಗನ ಕುಸುಮವಾಗಿದ್ದವು. ಬಹುಮುಖ್ಯವಾಗಿ ಟೊಮೆಟೊ ಹಣ್ಣಿನ ಬೆಲೆ ಕೇಳಿದ್ರೆ ಗ್ರಾಹಕರಂತೂ ಹೈರಾಣಾಗಿದ್ದರು. ಟೊಮೆಟೊ ಬೆಲೆ ದ್ವಿಶತಕದ ಗಡಿ ದಾಟಿದ್ದರಿಂದ ಅನೇಕರು ಊಟಕ್ಕೆ ಟೊಮೆಟೊ ಹುಳಿ ಬದಲಾಗಿ ಹುಣಸೆ ಹಣ್ಣು ಬಳಸುವತ್ತ ತಮ್ಮ ಚಿತ್ತವನ್ನು ನೆಟ್ಟಿದ್ದರು.

ಹೆಚ್ಚು ಪ್ರಮಾಣದಲ್ಲಿ ಬೆಳೆ

ಟೊಮೆಟೊ ಬೆಳೆಗಾರರು ಸಹ ಹಿಂದಿನ ವರ್ಷದ ದರ ನೋಡಿ ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಸಸಿಯನ್ನು ನಾಟಿ ಮಾಡಿದ್ದರು. ಏತನ್ಮಧ್ಯೆ, ಕಳೆದ ಮೂರು ತಿಂಗಳ ಹಿಂದೆ ಎರಡುಮೂರು ವಾರಗಳು ನಿರಂತರವಾಗಿ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಟೊಮೆಟೊ ಸೇರಿದಂತೆ ಹಲವು ತರಕಾರಿ ಬೆಳೆಗಳಿಗೆ ಕೊಳೆ ರೋಗ ಆವರಿಸಿ ಬೆಲೆ ಎರಿಕೆ ಕಂಡಿತ್ತು. ಬೆಲೆ ಎರಿಕೆ ಕಂಡ ರೈತರು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಟೊಮೆಟೊ ಬೆಳೆ ಬೆಳೆದಿದ್ದರಿಂದ ಮಾರುಕಟ್ಟೆಗೆ ಹೆಚ್ಚಾಗಿ ಟೊಮೆಟೊ ಆವಕವಾಗುತ್ತಿರುವುದು ಕೂಡ ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಟೊಮೆಟೊ ಬೆಳೆದ ಬೆಳೆಗಾರರು ದರ ಕುಸಿತದಿಂದ ಕಂಗಾಲಾಗುವಂತಾಗಿದೆ.

ಗ್ರಾಹಕರಿಗೆ ಮಾತ್ರ ಖುಷಿ

ಕಳೆದ ವರ್ಷ ಮತ್ತು ಈವರ್ಷ ಕಳೆದ ತಿಂಗಳ ಹಿಂದೆ ಟೊಮೆಟೊ ಹಣ್ಣುಗಳ ದರ ಏರಿಕೆಯಿಂದಾಗಿ ಗ್ರಾಹಕರು ಹೈರಾಣಾಗಿದ್ದರೆ, ರೈತರು ಹಾಗೂ ವ್ಯಾಪಾರಸ್ಥರು ಖುಷಿ ಖುಷಿಯಾಗಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ದರ ಕುಸಿತದಿಂದಾಗಿ ಗ್ರಾಹಕರು ಮಾತ್ರ ಖುಷಿಯಾಗಿದ್ದರೆ, ಟೊಮೆಟೊ ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ.

ನಿತ್ಯಾವಶ್ಯಕ ದಿನಸಿ ವಸ್ತುಗಳ ಜೊತೆ ಟೊಮೆಟೊ ಸೇರಿದಂತೆ ತರಕಾರಿ ಬೆಲೆಗಳು ಗಗನಮುಖಿಯಾಗಿದ್ದವು.ಕಳೆದ ತಿಂಗಳ ಹಿಂದೆ ಒಂದು ಕೆಜಿ ಟೊಮೆಟೊಗೆ 70 ರಿಂದ 80 ರು..ಗಳನ್ನು ಕೊಟ್ಟು ಖರೀದಿ ಮಾಡಿದ್ದೆವು. ಈ ಬಾರಿ ಮಳೆಗಾಲ ಹೆಚ್ಚಾಗಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಬೆಳೆಗಳ ಆವಕ ಕಡಿಮೆಯಾಗಿ ಮತ್ತಷ್ಟು ರೇಟು ಹೆಚ್ಚಾಗುತ್ತೆ ಅಂದುಕೊಂಡಿದ್ದೆ. ಆದರೆ ಟೊಮೆಟೊ ರೇಟು ಕಡಿಮೆಯಾಗಿದ್ದರಿಂದ ಸ್ವಲ್ಪ ನೆಮ್ಮದಿಯನ್ನುಂಟು ಮಾಡಿದೆ ಎಂದು ಗೃಹಿಣಿಯೊಬ್ಬರು ಹೇಳಿದರು.ಕೊಳೆಯುತ್ತಿರುವೆ ಟೊಮೆಟೋ

ಕಳೆದ ತಿಂಗಳ ಹಿಂದೆ 14 ಕೆಜಿ ಟೊಮೆಟೊ ಕ್ರೇಟ್ ಗೆ 700 ರಿಂದ 1000 ರೂ.ಗಳಿಗೆ ಹರಾಜಾಗುತ್ತಿತ್ತು. ಮಳೆ ಹೆಚ್ಚಾಗಿದ್ದರಿಂದ ಆವಕ ಕಡಿಮೆಯಾಗಿ ಮತ್ತಷ್ಟು ರೇಟು ಹೆಚ್ಚಾಗುತ್ತೆ ಅಂದುಕೊಂಡಿದ್ದೆವು. ಕಳೆದ ತಿಂಗಳ ಹಿಂದೆ ರೇಟು ತಕ್ಕಮಟ್ಟಿಗೆ ಇದ್ದು, ವ್ಯಾಪಾರಸ್ಥರು ಹಾಗೂ ರೈತರಿಗೆ ಬಹಳ ಅನುಕೂಲವಾಗಿತ್ತು. ಆದರೆ ಕಳೆದೊಂದು ವಾರದಿಂದ ರೇಟು ಕುಸಿತಗೊಂಡಿದ್ದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ನಾವೂ ಖರೀದಿ ಮಾಡಿ ಮಾರಾಟವಾಗದೇ ಇರುವುದರಿಂದ ಕೊಳೆತ ಹಣ್ಣುಗಳನ್ನು ತಿಪ್ಪೆಗೆ ಎಸೆಯುವಂತಾಗಿದೆ ಎಂದು ಎಪಿಎಂಸಿಯ ಟೊಮೆಟೊ ಸಗಟು ವರ್ತಕ ಮೋಹನ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ