- ರೋಗಬಾಧೆಯಿಂದ ಬೆಳೆ ಹಾಳು, ಪೂರೈಕೆ ಕುಸಿತ
- ಹೀಗಾಗಿ ಮತ್ತೆ ಶತಕದ ಸನಿಹಕ್ಕೆ- ಶೀಘ್ರ ದರ ಕೇಜಿಗೆ 100-120 ರು. ಆಗಬಹುದು
ಕನ್ನಡಪ್ರಭ ವಾರ್ತೆ ಬೆಂಗಳೂರುಮಾರುಕಟ್ಟೆಯಲ್ಲಿ ಟೊಮೆಟೋ ದರ ಮತ್ತೆ ಹೆಚ್ಚಳ ಕಂಡಿದ್ದು, ಮಂಗಳವಾರ ಕೆಜಿಗೆ ಗರಿಷ್ಠ ₹ 80 ನಂತೆ ಮಾರಾಟವಾಗಿದೆ. ಮಳೆ ಹಾಗೂ ರೋಗಬಾಧೆ ಕಾರಣದಿಂದ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಶೀಘ್ರ ದರ ₹ 100-120 ಆದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ವರ್ತಕರು ಹೇಳಿದ್ದಾರೆ.
ಹಸಿರು ತರಕಾರಿ, ಸೊಪ್ಪು, ಬೀನ್ಸ್ ಬಳಿಕ ಇದೀಗ ಕೆಂಪು ಸುಂದರಿ ಟೊಮೆಟೋ ಬೆಲೆ ಏಕಾಏಕಿ ಏರಿಕೆಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ಕೆಜಿಗೆ ₹ 40 ರೂವರೆಗೆ ಇತ್ತು. ಆದರೆ ಈಗ ₹ 80 ಕ್ಕೆ ಏರಿಕೆಯಾಗಿದೆ. ಎರಡು ಹಾಗೂ ಮೂರನೇ ದರ್ಜೆಯ ಟೊಮೆಟೋ ಕ್ರಮವಾಗಿ ₹ 50, ₹ 40 ಕ್ಕೆ ದೊರಕುತ್ತಿದೆ. ದಿನಬಳಕೆಯ ಟೊಮೆಟೋ ಬೆಲೆಯೇರಿಕೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ.ಟೊಮೆಟೋ ಸಗಟು ವ್ಯಾಪಾರಸ್ಥರಾದ ಇಬ್ರಾಸ್ ಖಾನ್ ಮಾತನಾಡಿ, ಮಂಡ್ಯ, ಮೈಸೂರು, ಮದ್ದೂರು, ಕನಕಪುರ ಬೆಲ್ಟ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಟೊಮೆಟೋ ಪ್ರಮಾಣ ಬಹುತೇಕ ಕುಸಿದಿದೆ. ಚಿಕ್ಕಮಗಳೂರು, ಕಡೂರು ಕಡೆಯಿಂದ ಕಳೆದ ಎರಡು ವರ್ಷದಿಂದಲೂ ಟೊಮೆಟೋ ಸರಿಯಾಗಿ ಬರುತ್ತಿಲ್ಲ. ಇನ್ನು ಕೋಲಾರದಲ್ಲೂ ಮಳೆ, ರೋಗಬಾಧೆ ಪೂರೈಕೆ ಮುಕ್ಕಾಲು ಭಾಗದಷ್ಟು ಕಡಿಮೆಯಾಗಿದೆ ಎಂದರು.
ಸದ್ಯ ಬೆಂಗಳೂರು ಮಾರುಕಟ್ಟೆ ಟೊಮೆಟೋಗೆ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದೆ. ಕಳೆದ ನಾಲ್ಕುದಿನಗಳಿಂದ ಅಲ್ಲೂ ಮಳೆಯಾಗುತ್ತಿದ್ದು, ಸಾಗಾಟ ಕಷ್ಟವಾಗಿದೆ. ಅಲ್ಲಿಯೂ ಕೆಜಿಗೆ ₹ 45 ದಾಟಿದೆ. ಸಗಟು ಮಾರುಕಟ್ಟೆ ಕಲಾಸಿಪಾಳ್ಯದಲ್ಲಿ 22ಕೆಜಿ ಟೊಮೆಟೋ ಕ್ರೇಟ್‌ಗೆ 1300-1500 ಗೆ ತಲುಪಿದೆ. ಅಂದರೆ ಹೊಲ್‌ಸೆಲ್ ದರವೇ ₹ 70 ತಲುಪಿದೆ. ಮುಂದಿನ ವಾರವೇ ಕೆಜಿ ದರ ₹ 120 ಆಗುವ ಸಾಧ್ಯತೆಯಿದೆ ಎಂದು ಖಾನ್ ತಿಳಿಸಿದರು.ನಾನಾ ಭಾಗಗಳಿಂದ ಬರುತ್ತಿದ್ದ ಟೊಮೇಟೊ ರಪ್ತು ಕಡಿಮೆ ಆಗಿದ್ದು ಈ ಪರಿಣಾಮ ಟೊಮೇಟೊ ದರ ಏರಿಕೆಗೆ ಮುಖ್ಯ ಕಾರಣವಾಗಿದೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಟೊಮೇಟೊ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಉಳಿದಂತೆ ಕಳೆದ ವಾರ ₹ 120 ಇದ್ದ ಬಟಾಣಿ ಈ ವಾರ ಕೆಜಿಗೆ ₹ 170 - ₹ 200 ಬೆಲೆ ಏರಿಕೆಯಾಗಿದೆ. ಶಿಮ್ಲಾ, ಕಾಶ್ಮೀರದಿಂದ ಬಟಾಣಿ ಬರುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದರು.