ನಾಳೆ ರೈತಸಂಘದಿಂದ ದೇವನಹಳ್ಳಿ ಚಲೋ

KannadaprabhaNewsNetwork | Published : Jun 23, 2025 11:47 PM

ಸರ್ಕಾರದ ಅನ್ಯಾಯವನ್ನು ವಿರೋಧಿಸಿ ರೈತರು ತಮ್ಮ ಪ್ರಾಣ ಹೋದರೂ ಭೂಮಿಯನ್ನು ಬಿಡುವುದಿಲ್ಲ ಎಂದು ಕಳೆದ ಮೂರುವರೆ ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಿದ್ದಾರೆ. ಈ ಹೋರಾಟ ಪ್ರಾರಂಭವಾದ ನಂತರ ಸರ್ಕಾರಗಳೇ ಬದಲಾಗಿದೆ, ಆದರೆ ರೈತರಿಗೆ ಮಾತ್ರ ನ್ಯಾಯ ಸಿಕ್ಕಿಲ್ಲ. ಇವರಿಗೆ ರೈತರು ಬುದ್ಧಿ ಕಲಿಸಲೇಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಚಿನ್ನದಂತಹ ಫಲವತ್ತಾದ ಭೂಮಿಯನ್ನು ಕಿತ್ತುಕೊಂಡು ಶ್ರೀಮಂತ ಉದ್ಯಮಿಗಳಿಗೆ ಕೊಡುವ ಸರ್ಕಾರದ ಹುನ್ನಾರ ನಡೆಯುವುದಿಲ್ಲ. ರಾಜ್ಯದ ರೈತರೆಲ್ಲಾ ಇದನ್ನು ವಿರೋಧಿಸಿ ಜೂನ್ 25 ರಂದು ಬೃಹತ್ ಸಂಖ್ಯೆಯಲ್ಲಿ ದೇವನಹಳ್ಳಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪ್ರೊ.ನಂಜುಂಡಸ್ವಾಮಿ ಬಣದ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರವು ಮೂರುವರೆ ವರ್ಷದ ಹಿಂದೆ ಕೆಐಎಡಿಬಿ ಮೂಲಕ ರೈತರಿಗೆ ನೋಟಿಸ್ ನೀಡಿತ್ತು. ಅನ್ನ ಬೆಳೆಯುವ ಭೂಮಿಯಲ್ಲಿ ಕೈಗಾರಿಕೆಗಳು ಕಟ್ಟುತ್ತಾರಂತೆ, ಯಾವುದೋ ಕೈಗಾರಿಕೋದ್ಯಮಿಗಳನ್ನು ಉದ್ದಾರ ಮಾಡಲು, ಇದೇ ಭೂಮಿಯನ್ನು ನಂಬಿ ಬದುಕುತ್ತಿರುವ ನಮ್ಮ ರೈತರನ್ನು ಅನಾಥರನ್ನಾಗಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಅಂತಿಮ ನೋಟಿಸ್‌

ಸರ್ಕಾರದ ಅನ್ಯಾಯವನ್ನು ವಿರೋಧಿಸಿ ರೈತರು ತಮ್ಮ ಪ್ರಾಣ ಹೋದರೂ ಭೂಮಿಯನ್ನು ಬಿಡುವುದಿಲ್ಲ ಎಂದು ಕಳೆದ ಮೂರುವರೆ ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಿದ್ದಾರೆ. ಈ ಹೋರಾಟ ಪ್ರಾರಂಭವಾದ ನಂತರ ಸರ್ಕಾರಗಳೇ ಬದಲಾಗಿದೆ, ಆದರೆ ರೈತರಿಗೆ ಮಾತ್ರ ನ್ಯಾಯ ಸಿಕ್ಕಿಲ್ಲ. ರೈತರು ಬೀದಿಯಲ್ಲಿ ಕುಳಿತು ವರ್ಷಗಳೇ ಕಳೆದರೂ, ಅಧಿಕಾರಕ್ಕೆ ಬಂದ ಎಲ್ಲರೂ ಅಂತಿಮ ನೋಟಿಸ್ ನೀಡಿದ್ದಾರೆ. ಹೀಗೆಯೇ ಬಿಟ್ಟರೆ ಇನ್ನು ಕೆಲವೇ ದಿನಗಳಲ್ಲಿ ನಮ್ಮ ರೈತರ ಎಲ್ಲ ಭೂಮಿಯನ್ನು ಕಬಳಿಸಿಯೇ ತೀರುತ್ತಾರೆ. ಇವರು ಹೋಗುತ್ತಿರುವ ರಭಸ ನೋಡಿದರೆ ರಾಜ್ಯದ ಯಾವ ರೈತರ ಕೈಯಲ್ಲೂ ಒಂದು ಇಂಚು ಭೂಮಿ ಇರಲು ಬಿಡುವುದಿಲ್ಲ ಈ ಭೂಗಳ್ಳರು. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಇವರಿಗೆ ಬುದ್ಧಿ ಕಲಿಸಲೇಬೇಕು ಎಂದರು.

ಉಲ್ಟಾ ಹೊಡೆದ ಸಿದ್ದರಾಮಯ್ಯ

ನಮ್ಮ ಮುಖ್ಯಮಂತ್ರಿಗಳು, ಸದಾ ಬಡವರ ಪರ, ನುಡಿದಂತೆ ನಡೆಯುವ ಸರ್ಕಾರ ಎಂದು ಭಾಷಣ ಮಾಡುವ ಸಿದ್ದರಾಮಯ್ಯ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ, ಸ್ವತಃ ನಮ್ಮ ಧರಣಿ ವೇದಿಕೆಗೆ ಬಂದು, ಫಲವತ್ತಾದ ಕೃಷಿ ಭೂಮಿಗಳಲ್ಲಿ ಕೈಗಾರಿಕೆಗಳು ಮಾಡುವುದು ಸರಿಯಲ್ಲ, ಸಣ್ಣ ಮತ್ತು ಅತಿಸಣ್ಣ ರೈತರ ಭೂಮಿ ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳ ಪಾಲಾಗಲು ಬಿಡುವುದಿಲ್ಲ ಎಂದು ಹೇಳಿ ನಮ್ಮ ಹೋರಾಟವನ್ನು ಬೆಂಬಲಿಸಿದ್ದವರು ಈಗ ಜಾಣ ಕಿವುಡರಾಗಿಬಿಟ್ಟಿದ್ದಾರೆ ಎಂದು ಟೀಕಿಸಿದರು.

ವಿರೋಧ ಪಕ್ಷದಲ್ಲಿದ್ದಾಗ ಆಡಿದ ಮಾತುಗಳು ಅಧಿಕಾರಕ್ಕೆ ಬಂದ ಮೇಲೆ ಮರೆತುಬಿಟ್ಟಿದ್ದಾರೆ. ಯಾವಾಗಲೂ ಬುದ್ಧ, ಬಸವ, ಅಂಬೇಡ್ಕರ್ ಹೆಸರು ಹೇಳುವ ಇವರಾದರೂ ವಚನಭ್ರಷ್ಟರಾಗಲಾರರು ಎಂದು ನಾವು ನಂಬಿದ್ದೆವು. ಈಗಲೂ ಕಾಲ ಮಿಂಚಿಲ್ಲ, ಈಗಲಾದರೂ ಚನ್ನರಾಯಪಟ್ಟಣ ಹೋಬಳಿಯ ಸಣ್ಣ, ಅತಿಸಣ್ಣ ರೈತರ, ಹಿಂದುಳಿದ ಸಮುದಾಯಗಳ 1777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟು ತಮ್ಮನ್ನು ತಾವು ಮಾತಿಗೆ ತಪ್ಪದ ಮುಖ್ಯಮಂತ್ರಿ ಎಂದು ಸಾಬೀತುಪಡಿಸಿಕೊಳ್ಳಲಿ ಎಂದರು.

ಸರ್ಕಾರ ಜಾಗ ಬಳಸಿಕೊಳ್ಳಲಿ

ಕೈಗಾರಿಕೆಗಳನ್ನು ಮಾಡುವ ಉದ್ದೇಶ ವಿದ್ದರೆ ಸರ್ಕಾರಿ ಜಾಗಗಳು ಬೇಕಾದಷ್ಟಿವೆ. ಯಾವ ಜಮೀನು ಬೆಳೆ ಬೆಳೆಯಲು ಆಗದೇ ಬೀಳು ಬಿದ್ದಿರುವ ಬರಡು ಜಮೀನುಗಳಲ್ಲಿ ಸ್ಥಾಪಿಸಲಿ. ಅದು ಬಿಟ್ಟು ಫಲವತ್ತಾದ ಭೂಮಿಗಳಲ್ಲಿ ಸ್ಥಾಪಿಸುವ ಬದಲು ಬಯಲು ಸೀಮೆಯ ಜಿಲ್ಲೆಗಳಿಗೆ ಕೃಷಿಗೆ ನೀರು ಹರಿಸಿ ಅನ್ನದಾತನನ್ನು ಉಳಿಸಲಿ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ರೈತ ಸಂಘದ ಶ್ರೀನಿವಾಸ್, ರಮೇಶ್, ಕಲ್ಯಾಣ್, ವೆಂಕಟರಾಮರೆಡ್ಡಿ, ಮತ್ತಿತರರು ಇದ್ದರು.