ಗದಗ: ಫೆ. 19ರಂದು ನಗರದಲ್ಲಿ ಶ್ರೀರಾಮ ಸೇನಾ, ಶಿವರಾಮಕೃಷ್ಣ ಸೇವಾ ಟ್ರಸ್ಟ್ ಹಾಗೂ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಗದಗ ನಗರ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ.
ಭವ್ಯ ಮೆರವಣಿಗೆ:ನಗರದ ರಾಚೋಟೇಶ್ವರ ದೇವಸ್ಥಾನದಿಂದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಭವ್ಯ ಮೆರವಣಿಗೆಯೂ ಆರಂಭವಾಗಲಿದೆ. ಈ ಬಾರಿ ಮೂರು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳ ಮೆರವಣಿಗೆ ನಡೆಯುವುದು ವಿಶೇಷ. ಹಲವು ಕಲಾ ತಂಡಗಳು ಹಾಗೂ ಬೃಹತ್ ಡಿಜಿ ಮೆರವಣಿಗೆ ನಗರದ ವಿವಿಧೆಡೆ ಸಂಚರಿಸಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಬಾಗಲಕೋಟಿ, ಕೊಪ್ಪಳ, ಹಾವೇರಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಯುವಕರು ಪಾಲ್ಗೊಳ್ಳವರು. ಮೆರವಣಿಗೆಯೂದ್ದಕ್ಕೂ ತಂಪು ಪಾನೀಯ, ಉಪಾಹಾರ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.
ರಕ್ತದಾನ ಶಿಬಿರ: ಜಯಂತ್ಯುತ್ಸವ ಅಂಗವಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಫೆ.16 ರಂದು ನಗರದ ರಾಚೋಟೇಶ್ವರ ದೇವಸ್ಥಾನದಲ್ಲಿ ರಕ್ತದಾನ ಶಿಬಿರ ನಡೆಯಿತು.ಬೃಹತ್ ಸಮಾವೇಶ:ಮೆರವಣಿಗೆ ನಂತರ ಸಂಜೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ ಬೃಹತ್ ಸಮಾವೇಶ ಜರುಗಲಿದೆ. ಸಮಾವೇಶದಲ್ಲಿ ನಾಡಿನ ಹಿರಿಯ ಸ್ವಾಮೀಜಿಗಳು, ರಾಷ್ಟ್ರಾಭಿಮಾನಿಗಳು, ಸಾಂಸ್ಕೃತಿಕ ಚಿಂತಕರು, ಸಮಾಜ ಸುಧಾರಕರು ಪಾಲ್ಗೊಳ್ಳುವರು ಎಂದು ಸಂಘಟಿಕರು ತಿಳಿಸಿದರು.