ನಾಳೆ ರಾಘವೇಂದ್ರ ಉಮೇದುವಾರಿಕೆ: ಹು.ಭಾ.ಅಶೋಕ್

KannadaprabhaNewsNetwork | Published : Apr 17, 2024 1:24 AM

ಸಾರಾಂಶ

ಬಿ.ವೈ.ರಾಘವೇಂದ್ರ ಏ.೧೮ರಂದು ನಾಮಪತ್ರ ಸಲ್ಲಿಸಲಿದ್ದು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹು.ಭಾ.ಅಶೋಕ್ ಕೋರಿದರು.

ಕನ್ನಡಪ್ರಭ ವಾರ್ತೆ ಸಾಗರ ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಏ.೧೮ರಂದು ನಾಮಪತ್ರ ಸಲ್ಲಿಸಲಿದ್ದು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಗ್ರಾಮಾಂತರ ಮಂಡಲದ ಮಾಧ್ಯಮ ಪ್ರಮುಖ್ ಹು.ಭಾ.ಅಶೋಕ್ ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೦ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕನಿಂದ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಅರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ್, ಹೆಚ್.ಹಾಲಪ್ಪ, ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಸಾಗರ ಹೊಸನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಮತಯಾಚನೆ ಮಾಡಿದ್ದಾರೆ. ಕರೂರು ಭಾರಂಗಿ ಹೋಬಳಿಯಲ್ಲಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಕೇಂದ್ರದ ಸಾಧನೆ, ತಾವು ಸಂಸದರಾಗಿ ಕ್ಷೇತ್ರಕ್ಕೆ ತಂದ ಯೋಜನೆಗಳನ್ನು ತಿಳಿಸಿದ್ದಾರೆ. ಮಾಜಿ ಸಚಿವ ಹೆಚ್.ಹಾಲಪ್ಪ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದು, ಮತಯಾಚನೆ ನಡೆಸಿದ್ದಾರೆ. ವಿ.ಮಹೇಶ್ ನೇತೃತ್ವದ ಚುನಾವಣಾ ನಿರ್ವಹಣಾ ಸಮಿತಿ ಗಣಪತಿ ಬೆಳಗೋಡು ಅವರ ಉಸ್ತುವಾರಿಯಲ್ಲಿ ಎಲ್ಲ ಸಿದ್ಧತೆ ನಡೆಸಿದೆ ಎಂದು ವಿವರಿಸಿದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ನಮ್ಮ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಮಾಡಿರುವ ಸಾಧನೆಯೆ ಅವರನ್ನು ಈ ಬಾರಿ ಚುನಾಣೆಯಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲಿದೆ. ಇದರ ಜೊತೆಗೆ ಸಿಗಂದೂರು ಸೇತುವೆ ನಿರ್ಮಾಣ, ರೈಲ್ವೆ ನಿಲ್ದಾಣ ಅಭಿವೃದ್ಧಿ, ಸೇತುವೆಗಳ ನಿರ್ಮಾಣ ಸಂಸದ ಬಿ.ವೈ.ರಾಘವೇಂದ್ರ ಅವರ ಸಾಧನೆಯ ಮೆಟ್ಟಿಲುಗಳಾಗಿವೆ. ಕೇಂದ್ರದ ಅತಿಹೆಚ್ಚು ಅನುದಾನವನ್ನು ಸದ್ಭಳಕೆ ಮಾಡಿಕೊಂಡ ಸಂಸದರ ಪೈಕಿ ಬಿ.ವೈ.ರಾಘವೇಂದ್ರ ದೇಶದಲ್ಲಿಯೆ ಎರಡನೇ ಸ್ಥಾನ ಪಡೆದಿದ್ದಾರೆ ಎಂದರು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಣಾಳಿಕೆ ಬಿಜೆಪಿ ಪರವಾಗಿ ಮತದಾರರು ಹೆಚ್ಚು ಒಲವು ಹೊಂದಲು ಕಾರಣವಾಗಲಿದೆ. ಯುವಶಕ್ತಿ, ನಾರಿಶಕ್ತಿ, ರೈತ ವರ್ಗದ ಅಭಿವೃದ್ಧಿ ಸೇರಿದಂತೆ ವಿವಿಧ ಹಂತದ ಅಭಿವೃದ್ಧಿಯನ್ನು ಪ್ರಣಾಳಿಕೆ ಹೊಂದಿದೆ. ಮೋದಿಯವರ ಜನಪರ ಆಡಳಿತ ಮತ್ತು ಯೋಜನೆಗಳು ಎಲ್ಲ ವರ್ಗದ ಜನರಿಗೆ ತಲುಪಿರುವುದು ಹೆಚ್ಚು ಮತ ಪಡೆಯಲು ಶ್ರೀರಕ್ಷೆಯಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮಧುರಾ ಶಿವಾನಂದ್, ಎಚ್.ಎಸ್.ರಮೇಶ್ ಹಾರೆಗೊಪ್ಪ, ಸತೀಶ್ ಕೆ., ಸಂತೋಷ್ ರಾಯಲ್, ಶ್ರೀಕಂಠೇಗೌಡ, ಪ್ರೇಮ ಕಿರಣ್ ಸಿಂಗ್, ಸುಮಾ ರವಿ, ರಾಜೇಂದ್ರ ಪೈ, ರಾಧಿಕಾ ಪೈ, ಶ್ವೇತಾ ಸಂತೋಷ್ ಇನ್ನಿತರರು ಹಾಜರಿದ್ದರು.

Share this article