ನಾಳೆ ಅಣ್ಣನ ನೆನಪು ಸಾಕ್ಷ್ಯ ನಾಟಕ: ಎಂ.ಸಿ.ಲಂಕೇಶ್

KannadaprabhaNewsNetwork | Published : May 22, 2025 11:47 PM
ನೆಲದನಿ ಬಳಗ ಆಯೋಜಿಸಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಸಾಕ್ಷ್ಯ ನಾಟಕ ಪ್ರದರ್ಶನ ಮೇ ೨೪ ರಂದು ಸಂಜೆ ೬ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ. ರಂಗಾಯಣ, ನೀನಾಸಂ, ಆಟಮಾಟ, ರಂಗಪಯಣ, ನಿರ್ಧಿಗಂತ, ಕಲಾಗಂಗೋತ್ರಿ ಸೇರಿದಂತೆ ರಾಜ್ಯದ ಪ್ರತಿಷ್ಠಿತ ಕಲಾತಂಡಗಳನ್ನು ಕರೆಸಿ ನಾಟಕ ಪ್ರದರ್ಶಿಸಲಾಗಿದೆ.
Follow Us

ಕನ್ನಡಪ್ರಭ ವಾರ್ತೆ ಮಂಡ್ಯ

ನೆಲದನಿ ಬಳಗ ಆಯೋಜಿಸಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಸಾಕ್ಷ್ಯ ನಾಟಕ ಪ್ರದರ್ಶನ ಮೇ ೨೪ ರಂದು ಸಂಜೆ ೬ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಹೇಳಿದರು.

ದಿವ್ಯ ಸಾನ್ನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ನೆಲದನಿ ಬಳಗದ ಪೋಷಕಿ ರುಕ್ಮಿಣಿ ಶಂಕರೇಗೌಡ ವಹಿಸುವರು. ಮಿಮ್ಸ್ ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಎಸ್.ರವಿಕುಮಾರ್, ಡಾ.ಆರ್.ಮನೋಹರ್, ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎಚ್.ಆರ್.ಕನ್ನಿಕ ಅವರನ್ನು ಅಭಿನಂದಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಿಎಸ್‌ಎಲ್‌ಎಫ್ ಅಂತಾರಾಷ್ಟ್ರಿಯ ನಿರ್ದೇಶಕ ಡಾ.ನಾಗರಾಜು ಬೈರಿ, ನಿವೃತ್ತ ಸಹ ಪ್ರಾಧ್ಯಾಪಕ ಮರೀಗೌಡ, ಸೌತ್ ಮಲ್ಟಿಪಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು ಅಭಿನಂದಿಸಲಿದ್ದಾರೆ ಎಂದರು.

ನೆಲದನಿ ಬಳಗವು ಹಲವವಾರು ಸಮಾಜಮುಖಿ ಕೆಲಸಗಳೊಂದಿಗೆ ರಂಗ ಭೂಮಿಯಲ್ಲೂ ಕೆಲಸ ಮಾಡುತ್ತಾ ಬಂದಿದೆ. ರಂಗಾಯಣ, ನೀನಾಸಂ, ಆಟಮಾಟ, ರಂಗಪಯಣ, ನಿರ್ಧಿಗಂತ, ಕಲಾಗಂಗೋತ್ರಿ ಸೇರಿದಂತೆ ರಾಜ್ಯದ ಪ್ರತಿಷ್ಠಿತ ಕಲಾತಂಡಗಳನ್ನು ಕರೆಸಿ ನಾಟಕ ಪ್ರದರ್ಶಿಸಿರುವುದಾಗಿ ಹೇಳಿದರು.

ಪ್ರಸ್ತುತ ದಿನಗಳಲ್ಲಿ ವೈಚಾರಿಕತೆಯ ನಾಟಕಗಳು ಕಡಿಮೆಯಾಗಿವೆ. ಇಂದಿನ ಪೀಳಿಗೆಗೆ ಕುವೆಂಪು ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ, ವೈಚಾರಿಕತೆ, ಪರಿಸರ ಕಾಳಜಿ, ವಿಡಂಬನೆ ಬಗ್ಗೆ ತಿಳಿಸಿಕೊಡಬೇಕಿದೆ. ಈ ಉದ್ದೇಶದಿಂದಲೇ ಬೆಂಗಳೂರಿನ ಪ್ರವರ ಥಿಯೇಟರ್ ತಂಡದಿಂದ ಅಣ್ಣನ ನೆನಪು ನಾಟಕವನ್ನು ಪ್ರಸ್ತುತಪಡಿಸುತ್ತಿರುವುದಾಗಿ ತಿಳಿಸಿದರು.

ಅಣ್ಣನ ನೆನಪು ಕೃತಿ ಮಹಾಕವಿ ಕುವೆಂಪುರವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಕುವೆಂಪು ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದ ಇವು ಕನ್ನಡ ಸಾಂಸ್ಕೃತಿಕ ಚರಿತೆಯ ಬಹುಮುಖ್ಯ ಅಧ್ಯಾಯಗಳೂ ಆಗಿವೆ. ಕುವೆಂಪು ವ್ಯಕ್ತಿತ್ವದಲ್ಲಿದ್ದ ಮಾನವೀಯತೆ, ಮುಗ್ಧತೆ, ವೈಜ್ಞಾನಿಕ ಮನೋಭಾವ, ನಿಷ್ಠುರತೆಯನ್ನು ಅವರ ಅನೇಕ ಪ್ರಸಂಗಗಳ ಮುಖಾಂತರ ತಿಳಿಸುತ್ತದೆ.

ತಮ್ಮ ಬಾಲ್ಯ, ಯೌವ್ವನದ ಕಾಲದ ಘಟನೆಗಳನ್ನು ತುಮಬಾ ಹಾಸ್ಯಮಯ ಶೈಲಿಯಲ್ಲಿ ನಿರೂಪಿಸಿರುವ ತೇಜಸ್ವಿ ಆ ಕಾಲದ ಸಾಹಿತ್ಯ ವಿಷಯಗಳನ್ನು ವಿವರಿಸುವಾಗ ಗಂಭೀರವಾದ ಭಾಷಾ ಪ್ರಯೋಗ ಬಳಸಿದ್ದಾರೆ. ಅಂದಿನ ಕಾಲಘಟ್ಟದಲ್ಲಿ ನಡೆದ ನವ್ಯ-ನವೋದಯಗಳ ಕಾಲಘಟ್ಟದ ನಡುವಿನ ತಿಕ್ಕಾಟದ ಪರಿಚಯವನ್ನು ಪರಿಚಯಿಸಿದ್ದಾರೆ. ರಂಗರೂಪವನ್ನು ಕರಣಂ ಪವನ್ ಪ್ರಸಾದ್, ವಿನ್ಯಾಸ ಮತ್ತು ನಿರ್ದೇಶನವನ್ನು ಹನು ರಾಮ ಸಂಜೀವ ಮಾಡಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಎಂ.ಸಿ.ಕುಮಾರ್‌ಗೌಡ, ಶಿವಮಲ್ಲು, ಹೆಚ್.ಎನ್.ನಾಗೇಶ್, ನವೀನ್‌ಕುಮಾರಿ ಇದ್ದರು.