ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ನಾಳೆ ಆಪರೇಷನ್‌

KannadaprabhaNewsNetwork | Updated : Dec 10 2024, 09:51 AM IST

ಸಾರಾಂಶ

ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರನಟ ದರ್ಶನ್‌ಗೆ ಡಿ.11ರ ಬುಧವಾರ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

 ಬೆಂಗಳೂರು : ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರನಟ ದರ್ಶನ್‌ಗೆ ಡಿ.11ರ ಬುಧವಾರ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

ದರ್ಶನ್‌ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ಹೈಕೋರ್ಟ್‌ಗೆ ಈ ವಿಷಯ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಕೋರಿ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್‌, ಜಗದೀಶ್‌, ಪ್ರದೋಶ್‌ ಎಸ್‌. ರಾವ್‌ ಸಲ್ಲಿಸಿರುವ ಜಾಮೀನು ಅರ್ಜಿಗಳು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.

ವಿಚಾರಣೆ ವೇಳೆ ದರ್ಶನ್‌ಗೆ ನೀಡಲಾಗಿರುವ ಮಧ್ಯಂತರ ಜಾಮೀನು ಕುರಿತು ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌, ಶಸ್ತ್ರಚಿಕಿತ್ಸೆಗೆ ಒಳಗಾಗಲು ಅ.30ರಂದು ಹೈಕೋರ್ಟ್‌ ದರ್ಶನ್‌ಗೆ ಆರು ವಾರ ಕಾಲ ಮಧ್ಯಂತರ ಜಾಮೀನು ನೀಡಿದೆ. ಆದರೆ, ಈವರೆಗೂ ದರ್ಶನ್‌ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿಲ್ಲ. ಈ ನಡಾವಳಿ ಪರಿಗಣಿಸಿ ಅವರ ಮಧ್ಯಂತರ ಜಾಮೀನು ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ಆಗ ದರ್ಶನ್‌ ಪರ ವಕೀಲ ಹಿರಿಯ ಸಿ.ವಿ. ನಾಗೇಶ್‌ ಅವರು ಅಂತಿಮ ವೈದ್ಯಕೀಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿ, ದರ್ಶನ್‌ ಯಾವ ದಿನದಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿರ್ಧರಿಸಬೇಕಾದವರು ವೈದ್ಯರು. ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ದರ್ಶನ್‌ಗೆ ನಾವು ಒತ್ತಾಯ ಮಾಡಲಾಗದು. ಮೇಲಾಗಿ ದರ್ಶನ್‌ಗೆ ಡಿ.11ರಂದು ಬೆನ್ನುಹುರಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಅಲ್ಲದೆ, ವೈದ್ಯರು ಐದು ವೈದ್ಯಕೀಯ ವರದಿ ನೀಡಿದ್ದಾರೆ. ವೈದ್ಯಕೀಯ ವರದಿ ಆಧರಿಸಿಯೇ ನಾನು ಸಹ ಮಂಡಿಸಿದ್ದೇನೆ. ಅ.20ರಂದು ನೀಡಿದ್ದ ವರದಿಯಲ್ಲಿ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡದೇ ಹೋದರೆ ಕಾಲು ಮರಗಟ್ಟುತ್ತದೆ ಎಂಬುದಾಗಿ ವೈದ್ಯರು ಹೇಳಿದ್ದರು. ನ.21ರ ವರದಿಯಲ್ಲಿ ಸರ್ಜರಿಗಾಗಿ ಸಿದ್ಧಪಡಿಸಲಾಗುತ್ತಿದೆ. ಆದರೆ, ರಕ್ತದೊತ್ತಡ ಏರಿಳಿತ ಇರುವುದರಿಂದ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ ಎಂದು ತಿಳಿಸಿದ್ದರು. ಇನ್ನು ಡಿ.2ರ ವರದಿಯಲ್ಲಿ ಕೆಲ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು. ಡಿ.5ರ ವರದಿಯಲ್ಲಿ ಸರ್ಜರಿಗೆ ಮುಂಚಿತವಾಗಿ ದರ್ಶನ್‌ಗೆ ನೀಡಬೇಕಾದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆ ಮೂಲಕ ಶಸ್ತ್ರ ಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿರುವುದಾಗಿ ತಿಳಿಸಲಾಗಿತ್ತು. ಅಂತಿಮವಾಗಿ ಡಿ.6ರ ವರದಿಯಲ್ಲಿ ಇದೇ 11ಕ್ಕೆ ಸರ್ಜರಿ ಮಾಡಲಾಗುತ್ತದೆ ಎಂಬುದಾಗಿ ತಿಳಿಸಲಾಗಿದೆ. ಆದ್ದರಿಂದ ದರ್ಶನ್ ಅವರು ಮಧ್ಯಂತರ ಜಾಮೀನಿನ ಯಾವುದೇ ಷರತ್ತು ಉಲ್ಲಂಘಿಸಿಲ್ಲ. ದೈಹಿಕವಾಗಿ ಸಕ್ಷಮರಾದಾಗ ಮಾತ್ರ ಸರ್ಜರಿ ಮಾಡಲು ಸಾಧ್ಯ ಎಂದು ಕೋರ್ಟ್‌ ಗಮನಕ್ಕೆ ತಂದರು.

Share this article