ಕನ್ನಡಪ್ರಭ ವಾರ್ತೆ ಹರಿಹರ
ಇಲ್ಲಿಗೆ ಸಮೀಪದ ಕೋಡಿಯಾಲ ಹೊಸಪೇಟೆ ಗ್ರಾಮದ ಮೂಲದುರ್ಗಾ ದೇವಿಯ 6ನೇ ವರ್ಷದ ವರ್ಧಂತಿ ಉತ್ಸವ ಹಾಗೂ ದುರ್ಗಾ ದೇವಿ ಜಾತ್ರಾ ಮಹೋತ್ಸವ ಮೇ 11 ಹಾಗೂ 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೂಲದುರ್ಗಾ ದೇವಸ್ಥಾನ ಟ್ರಸ್ಟ್ ಧರ್ಮದರ್ಶಿ ಅಪ್ಪಾಜಿ ಮಂಜುನಾಥ ಹೇಳಿದರು.ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ಮೂಲದುರ್ಗಾ ದೇವಸ್ಥಾನ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 11ರಂದು ಸಂಜೆ 4ರಿಂದ ಕೋಡಿಯಾಲ ಹೊಸಪೇಟೆ ಗ್ರಾಮದ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದಿಂದ ಮೂಲದುರ್ಗಾ ದೇವಸ್ಥಾನದವರೆಗೆ ಶ್ರೀ ದುರ್ಗಾದೇವಿ ಅಂಬಾರಿ ಉತ್ಸವ ನಡೆಯಲಿದೆ. ನೂರಾರು ಮಹಿಳೆಯರ ಪೂರ್ಣ ಕುಂಭಮೇಳ, ವಿವಿಧ ವಾದ್ಯಗಳೊಂದಿಗೆ ವಿಶೇಷ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆ ನಂತರ ದುರ್ಗಾ ದೇವಿಗೆ ಜಲಾಭಿಷೇಕ, ಹೋಮ- ಹವನ, ಭಕ್ತರಿಗೆ ಪ್ರಸಾದ ವಿತರಿಸಲಾಗುವುದು ಎಂದರು.
12ರಂದು ಬೆಳಗ್ಗೆ 8.30ರಿಂದ ನಿರ್ವಿಘ್ನ ಯಾಗ, ಪಂಚವಿಂಶತಿ ಕಲಶಾರಾಧನೆ ಪ್ರಧಾನ ಯಾಗ, ಕುಂಭಾಬಿಷೇಕ, ದುರ್ಗಾ ಸಹಸ್ರನಾಮ, ಕದಳಿ ಯಾಗ ನಡೆಯಲಿದೆ. ಸಂಜೆ 5 ರಿಂದ ಶ್ರೀ ನಾಗದೇವತೆಯರಿಗೆ ನಾಗತನು ತರ್ಪಣ ಪ್ರಸನ್ನ ಪೂಜೆ ಹಮ್ಮಿಕೊಳ್ಳಲಾಗಿದೆ. ಉಡುಪಿ ಕೋರಂಗಪಾಡಿ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಮಾರ್ಗದರ್ಶನದಲ್ಲಿ ಪೂಜೆ ನೇರವೇರಲಿದೆ ಎಂದು ಮಾಹಿತಿ ನೀಡಿದರು.2 ದಿನಗಳ ಕಾರ್ಯಕ್ರಮದಲ್ಲಿ ಹರಿಹರ, ರಾಣೇಬೆನ್ನೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನೀರಿಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಖಜಾಂಚಿ ಪಾರ್ವತಮ್ಮ ಕರಡಪ್ಪನವರ್, ವೀರೇಶ್ ಅಜ್ಜಣ್ಣನವರ, ನಾಗರಾಜ್ ಕುರುವತ್ತಿ, ನಗರಸಭೆ ಸದಸ್ಯ ಆರ್. ದಿನೇಶ್ ಬಾಬು, ಕಂಚಿಕೇರಿ ಕರಿಬಸಪ್ಪ, ವೀರಣ್ಣ ಹೊನ್ನಪ್ಪನವರ್, ರಾಜು ಪವಾರ್, ಕವಿತಾ, ಇತರರು ಉಪಸ್ಥಿತರಿದ್ದರು.- - -
-07ಎಚ್‍ಆರ್‍ಆರ್01.ಜೆಪಿಜಿ: ಶ್ರೀ ಮೂಲದುರ್ಗಾ ದೇವಿ.