ನಾಳೆ ನಾಲೆ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಮುತ್ತಿಗೆ

KannadaprabhaNewsNetwork |  
Published : Jul 07, 2025, 11:47 PM ISTUpdated : Jul 07, 2025, 11:48 PM IST
ಹೊನ್ನಾಳಿ ಫೋಟೋ 6ಎಚ್.ಎಲ್.ಐ1. ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಭದ್ರನಾಲ ಚಾನಲ್ ಕಾಮಗಾರಿ ಅವೈಜ್ಞಾನಿಕದಿಂದ ಕೂಡಿರುವ ಬಗ್ಗೆ ಜಾಗೃತಿ ಮೂಡಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು | Kannada Prabha

ಸಾರಾಂಶ

ಭದ್ರಾ ನಾಲೆಯನ್ನು ಸೀಳಿ ಬೇರೆ ಜಿಲ್ಲೆಗಳಿಗೆ ನೀರು ಕೊಡುವ ಕಾಮಗಾರಿ ಅವೈಜ್ಞಾನಿಕದಿಂದ ಕೂಡಿದೆ. ಆದ್ದರಿಂದ ತಕ್ಷಣವೇ ಕಾಮಗಾರಿ ನಿಲ್ಲಿಸಬೇಕು. ಈ ವಿಚಾರದಲ್ಲಿ ರೈತರನ್ನು ಜಾಗೃತಗೊಳಿಸಲು ರೈತರು ಜಿಲ್ಲೆಯಾದ್ಯಂತ ಈಗಾಗಲೇ ಕರಪತ್ರ ಅಭಿಯಾನ ಆರಂಭಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

- ಶಿವಮೊಗ್ಗದ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಕಚೇರಿಗೆ ಮುತ್ತಿಗೆ: ರೇಣುಕಾಚಾರ್ಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭದ್ರಾ ನಾಲೆಯನ್ನು ಸೀಳಿ ಬೇರೆ ಜಿಲ್ಲೆಗಳಿಗೆ ನೀರು ಕೊಡುವ ಕಾಮಗಾರಿ ಅವೈಜ್ಞಾನಿಕದಿಂದ ಕೂಡಿದೆ. ಆದ್ದರಿಂದ ತಕ್ಷಣವೇ ಕಾಮಗಾರಿ ನಿಲ್ಲಿಸಬೇಕು. ಈ ವಿಚಾರದಲ್ಲಿ ರೈತರನ್ನು ಜಾಗೃತಗೊಳಿಸಲು ರೈತರು ಜಿಲ್ಲೆಯಾದ್ಯಂತ ಈಗಾಗಲೇ ಕರಪತ್ರ ಅಭಿಯಾನ ಆರಂಭಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಯಕ್ಕನಹಳ್ಳಿಯಲ್ಲಿ ಭಾನುವಾರ ಭದ್ರಾ ನಾಲೆ ಸೀಳುವ ಅವೈಜ್ಞಾನಿಕ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜು.9ರಂದು ಶಿವಮೊಗ್ಗದ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಈ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕುಗಳಿಗೆ ಕುಡಿಯುವ ನೀರು ಕಲ್ಪಿಸಲು ನಮ್ಮ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಹೊಸದುರ್ಗ ಹಾಗೂ ತರೀಕೆರೆಯ ಜನತೆ ಕೂಡ ನಮ್ಮ ಸಹೋದರರು. ಅದರಲ್ಲಿ ಎರಡು ಮಾತಿಲ್ಲ. 7 ಟಿಎಂಸಿ ನೀರನ್ನು ಕುಡಿಯುವ ನೀರಿಗೆ ರಿಸರ್ವ್ ಮಾಡಿದೆ. ಅದರಲ್ಲಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಭದ್ರಾ ನಾಲೆಯನ್ನು ಸೀಳಿ ನೀರು ಹರಿಸುವುದಕ್ಕೆ ಮಾತ್ರ ತೀವ್ರ ವಿರೋಧ ಇದೆ ಎಂದರು.

ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಒಡೆದುಹಾಕಿರುವ ನಾಲೆಯನ್ನು ಸಿಮೆಂಟ್ ಕಾಂಕ್ರಿಟ್ ಹಾಕಿ ಮರುನಿರ್ಮಾಣ ಮಾಡಬೇಕು. ದಾವಣಗೆರೆ ಜಿಲ್ಲೆಗೆ ಶೀಘ್ರ ನೀರು ಹರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಜೆ.ಕೆ.ಸುರೇಶ್, ನೆಲಹೊನ್ನೇ ಮಂಜುನಾಥ್, ರಮೇಶ್ ಗೌಡ, ಸಿದ್ದಲಿಂಗಪ್ಪ, ಅನಿಲ್, ಮೇಘರಾಜ್, ಹಾಲೇಶ್, ಗಣೇಶ್, ಕರಿಬಸಪ್ಪ, ಶಂಬಣ್ಣ, ನಿಂಗರಾಜ ಸ್ವಾಮಿ ಹಾಗೂ ಇತರರು ಇದ್ದರು.

- - -

(ಕೋಟ್‌) ಕಾಲುವೆ ಮಟ್ಟದಿಂದ 5 ಅಡಿ ಕೆಳಗೆ ಪೈಪು ಅಳವಡಿಸಿ ನೀರು ತೆಗೆದುಕೊಂಡು ಹೋದರೆ ದಾವಣಗೆರೆ ಅಚ್ಚುಕಟ್ಟುದಾರರಿಗೆ ನೀರು ಹರಿಯುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಅರ್ಪಿಸಿ, ಭದ್ರಾ ಕಾಮಗಾರಿಯ ಸಾಧಕ- ಬಾಧಕಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ಮಾತನಾಡಿದ್ದಾರೆ.

- ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ

- - -

-6ಎಚ್.ಎಲ್.ಐ1.ಜೆಪಿಜಿ:

ಯಕ್ಕನಹಳ್ಳಿ ಜಾಗೃತಿ ಸಭೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿದರು.

PREV