ಕಡಲ ಒಡಲು ಸೇರುತ್ತಿದೆ ನಿತ್ಯ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ

KannadaprabhaNewsNetwork | Updated : Mar 09 2024, 03:52 PM IST

ಸಾರಾಂಶ

ಸಮುದ್ರರಾಜನಿಗೆ ವಂದಿಸುವ ಸಾಗರ ಆರತಿ ಕಾರ್ಯಕ್ರಮ ನಿರಂತರ ನಡೆಯುತ್ತಿರಬೇಕು. ಈ ಮೂಲಕ ಪೂಜನೀಯ ಭಾವನೆಯೊಂದಿಗೆ ಕಡಲ ಒಡಲನ್ನು ಸ್ವಚ್ಛ-ಸುಂದರವಾಗಿ ಇಟ್ಟುಕೊಳ್ಳಬೇಕು.

ಗೋಕರ್ಣ: ಸಮುದ್ರರಾಜನಿಗೆ ವಂದಿಸುವ ಸಾಗರ ಆರತಿ ಕಾರ್ಯಕ್ರಮ ನಿರಂತರ ನಡೆಯುತ್ತಿರಬೇಕು. ಈ ಮೂಲಕ ಪೂಜನೀಯ ಭಾವನೆಯೊಂದಿಗೆ ಕಡಲ ಒಡಲನ್ನು ಸ್ವಚ್ಛ-ಸುಂದರವಾಗಿ ಇಟ್ಟುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಧಾರವಾಡ ವಲಯದ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.

ಅವರು ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಪ್ರಾರಂಭವಾದ ಸಾಗರ ಆರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಶಿವನ ಪ್ರತಿ ಸ್ಥಳದಲ್ಲಿ ನಿತ್ಯ ದೇವರ ಸ್ಮರಣೆ ಮಾಡಿ ನಮಿಸಿದಂತೆ , ನಮ್ಮ ಪರಿಸರವನ್ನು ಪರಿಶುದ್ಧತೆಯಿಂದ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಬಿ.ಕೆ. ಸತೀಶ ಮಾತನಾಡಿ, ಪ್ರತಿ ದಿನ ಟನ್‍ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಾವು ಕಡಲಿಗೆ ಸೇರಿಸುತ್ತಿದ್ದೇವೆ. 

ಪೃಕೃತಿ ಉಳಿದರೆ ನಮ್ಮ ಉಳಿವು, ಇದನ್ನು ಅರಿತು ನಾವು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು. ಪರ್ಯಾಯ ವಸ್ತುಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು. ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ಅಪಾಯವನ್ನು ವಿವರಿಸಿದರು.ತಾಪಂ ಇಒ ಹಾಗೂ ಬಿಇಒ ರಾಜೇಂದ್ರ ಭಟ್ ಮಾತನಾಡಿ, ಗೋಕರ್ಣ ಪುಣ್ಯ ಸ್ಥಳವನ್ನು ಸ್ವಚ್ಛ, ಸುಂದರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ. 

ಜನರಿಗೆ ಪರಿಸರ ಕಾಳಜಿ ನೀಡುವ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಪ್ರಶಂಸನಾರ್ಹ ಎಂದರು.ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಮುರಳಿಧರ ಪ್ರಭು ಮಾತನಾಡಿ, ಧಾರ್ಮಿಕತೆ ಬೆಳೆಯಬೇಕು.

 ಜತೆಗೆ ನಮ್ಮ ನೆಲೆದ ಸೌಂದರ್ಯ ಕಾಪಾಡಬೇಕು. ಇದರಿಂದ ಸ್ವಚ್ಛ ಪರಿಸರದಲ್ಲಿ ದೇವಾಲಯ ಅಭಿವೃದ್ಧಿಯಾಗಬೇಕು ಎಂಬುದೇ ಮುಖ್ಯ ಉದ್ದೇಶವಾಗಿದ್ದು, ಸಾಗರದ ತೀರವನ್ನು ಸ್ವಚ್ಛವಾಗಿಟ್ಟು ಪರಿಸರ ಪೂರಕ ಪ್ರವಾಸೋದ್ಯಮ ಬೆಳೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ನಾರಾಯಣ ಜಿ. ನಾಯಕ, ವಿ.ಎ. ಬೆಂಡಿಗೇರಿ, ಡಾ. ಜಯದೇವ ಬಳಗಂಡಿ, ತಾಲೂಕು ವೈದ್ಯಾಧಿಕಾರಿ ಡಾ. ಆಜ್ಞಾ ನಾಯಕ, ಕೆಡಿಸಿ ಬ್ಯಾಂಕ್‍ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ (ಯೋಜನೆ ಹಾಗೂ ಅಭಿವೃದ್ಧಿ ವಿಭಾಗದ) ಸುರೇಶ ಪ್ರಭು ಉಪಸ್ಥಿತರಿದ್ದರು.

ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಮಹಾಬಲ ಉಪಾಧ್ಯಾ ಸ್ವಾಗತಿಸಿದರು. ವೇ. ದತ್ತಾತ್ರೇಯ ಹಿರೇಗಂಗೆ ವಂದಿಸಿದರು. ಪತ್ರಕರ್ತ ಗಣೇಶ ಜೋಶಿ ನಿರ್ವಹಿಸಿದರು. 

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ನಂತರ ವಾದ್ಯ ಘೋಷ ಚಂಡೆನಾದದೊಂದಿಗೆ ಮಹಾಬಲೇಶ್ವರನಿಗೆ ಬೆಳಗಿದ ದೀಪದಿಂದ ಸಾಗರ ಆರತಿ ಕುಮಟಾ ಯುವಬ್ರಿಗೇಡ್ ತಂಡದಿಂದ ನಡೆಯಿತು. ಬೃಹತ್ ವೇದಿಕೆಯಲ್ಲಿ ಕಡಲಿಗೆ ವಂದಿಸುವ ಈ ಕಾರ್ಯಕ್ರಮ ನೆರೆದಿದ್ದ ಸಹಸ್ರಾರು ಜನರನ್ನು ಆಕರ್ಷಿಸಿತು. 

ಇನ್ನೂ ಕಡಲ ತಟದಲ್ಲಿ ರಭಸದಿಂದ ಬೀಸುತ್ತಿದ್ದ ಗಾಳಿ ಆರತಿ ಬೆಳಗುವ ವೇಳೆ ಏಕಾಏಕಿ ನಿಂತಿದ್ದು ಅಚ್ಚರಿಗೆ ಕಾರಣವಾಯಿತು. ಶಿವನ ಮಹಿಮೆ ಇದು ಎಂದು ಜನರು ಉದ್ಗರಿಸಿದ್ದರು.

ಇದಾದ ಬಳಿಕ ಮೈತ್ರಿ ಕಲಾ ಟ್ರಸ್ಟ್‌ ಅವರಿಂದ ಭರತ ನಾಟ್ಯ, ಅಶೋಕೆಯ ವಿಷ್ಣುವಿದ್ಯಾಪೀಠದ ಪಾರಂಪರಿಕ ಹಾಗೂ ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ಮನರಂಜಿಸಿತು.

Share this article