ಗದಗ: ತೋಂಟದಾರ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ನಡೆದಾಡುವ ವಿಶ್ವವಿದ್ಯಾಲಯ ಆಗಿದ್ದರು. ಒಮ್ಮೆ ಅವರೊಂದಿಗೆ ಮಾತನಾಡಿದರೆ ಹತ್ತು ಪುಸ್ತಕ ಓದಿದಷ್ಟು ಜ್ಞಾನ ಸಿಗುತ್ತಿತ್ತು ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಭಾವಪೂರ್ಣವಾಗಿ ಸ್ಮರಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಖ್ಯಾತ ವೈದ್ಯ ಡಾ. ಸೋಲೋಮನ್, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಸಂಸದ ಐ.ಜಿ .ಸನದಿ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಸಿದ್ದರಾಮ ಶ್ರೀಗಳು ವಹಿಸಿದ್ದರು. ಮಲ್ಲಿಕಾರ್ಜುನ ಶ್ರೀಗಳು, ತೋಂಟದ ನಿಜಗುಣಪ್ರಭು ಶ್ರೀಗಳು, ಸೋಮೇಶ್ವರ ಶ್ರೀಗಳು, ನುಲಿಯ ಚಂದಯ್ಯ ಶ್ರೀಗಳು, ಮಹಾಂತೇಶ್ವರ ದೇವರು, ಗುತ್ತಲದ ಶ್ರೀಗಳು, ಸಭಾಪತಿ ಬಸವರಾಜ ಹೊರಟ್ಟಿ, ರೋಣ ಶಾಸಕ ಜಿ.ಎಸ್.ಪಾಟೀಲ, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಭೀಮವ್ವ ಶಿಳ್ಳಿಕ್ಯಾತರ, ಸಾಹಿತಿ ರಂಜಾನ್ ದರ್ಗಾ, ಭೋಜರಾಜ ಪೊಪರಿಮಠ, ರಾಜು ಕುರಡಗಿ, ಕ್ಯಾ. ಮಹೇಶ್ ಮಾಲಗಿತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಭಾವೈಕ್ಯತಾ ಯಾತ್ರೆ:ಶ್ರೀಗಳ 76ನೇ ಜಯಂತಿ ಅಂಗವಾಗಿ ಶುಕ್ರವಾರ ಬೆಳಗ್ಗೆ ನಗರದ ಭೀಷ್ಮಕೆರೆ ಆವರಣದಲ್ಲಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಯಿಂದ ತೋಂಟದಾರ್ಯ ಮಠದ ಆವರಣದವರೆಗೂ ಭಾವೈಕ್ಯತೆ ಯಾತ್ರೆ ನಡೆಯಿತು. ಈ ಯಾತ್ರೆಗೆ ಮಾಜಿ ಶಾಸಕ ಡಿ.ಆರ್. ಪಾಟೀಲ ಚಾಲನೆ ನೀಡಿದರು. ತೋಂಟದ ಡಾ. ಸಿದ್ದರಾಮ ಸ್ವಾಮೀಜಿಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಶ್ರೀ ಮಠದ ಭಕ್ತರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.