ಇತಿಹಾಸ, ಪುರಾಣಗಳಲ್ಲಿ ಮಧ್ಯಸ್ಥಿಕೆಗೆ ಅಗ್ರಸ್ಥಾನ: ಆರ್. ನಟರಾಜ್

KannadaprabhaNewsNetwork |  
Published : Jun 26, 2026, 02:45 AM IST
ಬಳ್ಳಾರಿಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರದಲ್ಲಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ನ್ಯಾಯಾಧೀಶರು ಭಾಗವಹಿಸಿದ್ದರು.  | Kannada Prabha

ಸಾರಾಂಶ

ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ 1ನೇ ಮಹಡಿಯ ಸಭಾಂಗಣದಲ್ಲಿ ಇತ್ತೀಚೆಗೆ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ವರ್ಚುವಲ್ ಮೂಲಕ ನ್ಯಾಯಮೂರ್ತಿ ಆರ್. ನಟರಾಜ್ ಉದ್ಘಾಟಿಸಿದರು.

ಬಳ್ಳಾರಿ: ಮಧ್ಯಸ್ಥಿಕೆಯನ್ನು ಕಾನೂನುಬದ್ಧಗೊಳಿಸಲಾಗಿದೆ, ವಿವಾದದಲ್ಲಿರುವ ಕಕ್ಷಿದಾರರ ನಡುವೆ ಸಂಧಾನ ಮೂಡಿಸುವಲ್ಲಿ ನ್ಯಾಯಾಧೀಶರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯಾವ ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಕಳುಹಿಸಬೇಕು ಎಂಬುದನ್ನು ನ್ಯಾಯಾಧೀಶರೇ ನಿರ್ಧರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ, ಬಳ್ಳಾರಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ನ್ಯಾಯಮೂರ್ತಿ ಆರ್. ನಟರಾಜ್ ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಜಂಟಿ ಆಶ್ರಯದಲ್ಲಿ ನ್ಯಾಯಾಧೀಶರು, ರೆಫರಲ್ ಜಡ್ಜ್‌ಗಳಿಗೆ ಮಧ್ಯಸ್ಥಿಕೆ ಕುರಿತು ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ 1ನೇ ಮಹಡಿಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಮಧ್ಯಸ್ಥಿಕೆ ಅಥವಾ ಸಂಧಾನ ಎಂಬುದು ಹೊಸದೇನಲ್ಲ, ಮೊದಲಿನಿಂದಲೂ ವಿವಾದಗಳನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳುವ ಸಂಪ್ರದಾಯವನ್ನು ಭಾರತವು ಹೊಂದಿದೆ. ಕುಟುಂಬದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಹಿಡಿದು ಹಳ್ಳಿಯ ಪಂಚಾಯಿತಿ ವರೆಗೆ ನಮ್ಮ ದೈನಂದಿನ ಜೀವನದಲ್ಲಿ ಪೋಷಕರು ಮತ್ತು ಹಿರಿಯರು ಮಧ್ಯಸ್ಥಿಕೆ ವಹಿಸುತ್ತಾ ಬಂದಿದ್ದಾರೆ. ಇಂದು ನಾವು ಸಾಂಸ್ಥಿಕ ನ್ಯಾಯದಾನದ ವ್ಯವಸ್ಥೆಗೆ ಬದಲಾಗಿದ್ದರೂ ನಮ್ಮ ಇತಿಹಾಸ ಮತ್ತು ಪುರಾಣಗಳಲ್ಲಿ ಮಧ್ಯಸ್ಥಿಕೆಗೆ ಅಗ್ರಸ್ಥಾನವಿದೆ ಎಂದರು.

ಮಧ್ಯಸ್ಥಿಕೆಯು ಕೇವಲ ಪ್ರಕರಣಗಳನ್ನು ಇತ್ಯರ್ಥಪಡಿಸುವುದಿಲ್ಲ, ಬದಲಿಗೆ ಕರಗಿಹೋದ ಸಂಬಂಧಗಳನ್ನು ಬೆಸೆಯುತ್ತದೆ. ಉಭಯ ಪಕ್ಷಗಳ ನಡುವಿನ ದ್ವೇಷವನ್ನು ತಣಿಸಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಬದುಕಲು ದಾರಿ ಮಾಡಿಕೊಡುತ್ತದೆ ಎಂದು ಆಶಿಸುತ್ತಾ ತರಬೇತಿ ಶಿಬಿರಕ್ಕೆ ಶುಭ ಹಾರೈಸಿದರು.

ನ್ಯಾ. ಸಿ.ಎಂ. ಪೂಣಚ್ಚ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿ, ನ್ಯಾಯಾಲಯಗಳ ಮೇಲಿರುವ ಅಗಾಧವಾದ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಮತ್ತು ಕಕ್ಷಿದಾರರ ನಡುವಿನ ಬಾಂಧವ್ಯ ಉಳಿಸಲು ಪರ್ಯಾಯ ವಿವಾದ ಬಗೆಹರಿಕೆ ವ್ಯವಸ್ಥೆ, ಅದರಲ್ಲೂ ವಿಶೇಷವಾಗಿ ಮಧ್ಯಸ್ಥಿಕೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ಮಧ್ಯಸ್ಥಿಕೆಯು ಈಗ ಕೇವಲ ಒಂದು ಆಯ್ಕೆಯಾಗಿ ಉಳಿದಿಲ್ಲ. ಬದಲಿಗೆ ಅದೊಂದು ಶಾಸನಬದ್ಧ ಆದೇಶವಾಗಿದೆ. ನ್ಯಾಯಾಂಗ ವ್ಯವಸ್ಥೆಯು ಇಂದು ಎದುರಿಸುತ್ತಿರುವ ಅತಿದೊಡ್ಡ ಸವಾಲೆಂದರೆ ಪ್ರಕರಣಗಳ ಅಗಾಧ ಬಾಕಿ. ಇಂತಹ ಸಂದರ್ಭದಲ್ಲಿ ನ್ಯಾಯಾಧೀಶರು ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಒಪ್ಪಿಸುವ ಮೂಲಕ ನ್ಯಾಯಾಲಯದ ಹೊರೆಯನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಹೇಳಿದರು.

ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಬೃಂದಾ ನಂದಕುಮಾರ್, ಜೋ ಜೋಸೆಫ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು.

ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ. ಚಂದ್ರಶೇಖರ್, ವಿಜಯನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ರಾಜಶೇಖರ್, ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ಪ್ರಭು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಸ್ಡಿಎಂಸಿ ಕೊಡುಗೆ ಅನನ್ಯ
ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಆತಂಕ!