ಕುಮಟಾ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ಹಾಗೂ ಉಗ್ರರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಇಲ್ಲಿನ ಯುವ ಬ್ರಿಗೇಡ್ ತಂಡ ಹಾಗೂ ನಿವೃತ್ತ ಸೈನಿಕರ ಸಂಘದಿಂದ ಸಾರ್ವಜನಿಕರೊಟ್ಟಿಗೆ ಪಟ್ಟಣದ ಮಾಸ್ತಿಕಟ್ಟೆ ವೃತ್ತದಿಂದ ರಥಬೀದಿಯ ಗಾಂಧಿ ಚೌಕದವರೆಗೆ ಗುರುವಾರ ಸಂಜೆ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಯಿತು.ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವಿನಾಯಕ ನಾಯ್ಕ ಮಾತನಾಡಿ, ಇಷ್ಟು ದಿನ ಸೈನಿಕರನ್ನು ಗುರಿಯಾಗಿಸಿ ಉಗ್ರದಾಳಿಗಳು ನಡೆಯುತ್ತಿದ್ದವು. ಇತ್ತೀಚೆಗೆ ಸರ್ಕಾರ ಸೈನಿಕರಿಗೆ ಹಲವು ವ್ಯವಸ್ಥೆಗಳನ್ನು ನೀಡಿ ಹೆಚ್ಚು ಸುರಕ್ಷಿತಗೊಳಿಸಿದೆ. ಹೀಗಾಗಿ ಈಗ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಹೇಡಿಯಂತೆ ದಾಳಿ ನಡೆಸಿ ಕೊಂದಿದ್ದಾರೆ. ಇದು ಅತ್ಯಂತ ಹೇಯಕೃತ್ಯವಾಗಿದೆ. ಇಂದು ಕಾಶ್ಮೀರದಲ್ಲಿ ನಡೆದ ಘಟನೆ ನಾಳೆ ಕುಮಟಾದಲ್ಲೂ ನಡೆಯಬಹುದು. ಹೀಗಾಗಿ ದೇಶದ್ರೋಹಿಗಳನ್ನು ಹೊಡೆದೋಡಿಸಲು ಎಲ್ಲರೂ ಒಂದಾಗಬೇಕು ಎಂದರು.
ಯುವ ಬ್ರಿಗೇಡ್ ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಘಟನೆಯಿಂದ ಸಂಪೂರ್ಣ ಮಾನವ ಸಮಾಜ ತಲೆತಗ್ಗಿಸುವಂತಾಗಿದೆ. ಇನ್ನು ಮುಂದಾದರೂ ಜಾತಿ, ರಾಜಕೀಯ ಬಿಟ್ಟು ಹಿಂದೂಗಳು ಒಟ್ಟಾಗಬೇಕು. ದೇಶಕ್ಕಾಗಿ ಒಗ್ಗಟಾಗಬೇಕು ಎಂದರು.ಹಿಂದೂ ಹೋರಾಟಗಾರ ಪ್ರಶಾಂತ ನಾಯ್ಕ ಮಾತನಾಡಿ, ಕಾಶ್ಮೀರದಲ್ಲಿ ಪ್ರವಾಸಿಗರ ಪೈಕಿ ಧರ್ಮ ಪ್ರಶ್ನಿಸಿ ಮಾಡಿದ ಉಗ್ರರ ಈ ದಾಳಿ ಪ್ರತಿಯೊಬ್ಬ ಹಿಂದೂವಿಗೂ ನೋವಾಗಿದೆ. ಇಂದು ನಡೆಸಿದ ಪಂಜಿನ ಮೆರವಣಿಗೆ ಸೌಮ್ಯವಾಗಿದ್ದು ಮತ್ತೆ ಇದೇ ತರಹದ ಘಟನೆ ನಡೆದರೆ ಪಂಜು ಇರುವ ಕೈನಲ್ಲಿ ಬೇರೆ ವಸ್ತುಗಳನ್ನು ಪ್ರತಿಯೊಬ್ಬ ಹಿಂದೂ ತೆಗೆದುಕೊಳ್ಳುವ ಅನಿವಾರ್ಯತೆ ಬರಬಹುದು ಎಂದರು.
ನಿವೃತ್ತ ಸೈನಿಕರು, ಯುವ ಬ್ರಿಗೇಡ್ ಸದಸ್ಯರು, ಹಿಂದೂ ಜಾಗರಣಾ ವೇದಿಕೆ ಸದಸ್ಯರು, ಹಿಂದೂ ಸನಾತನ ಸಂಸ್ಥೆಯ ಸದಸ್ಯರು ಇನ್ನಿತರ ಹಿಂದೂ ಮುಖಂಡರು ಪಾಲ್ಗೊಂಡಿದ್ದರು.