ಕನ್ನಡಪ್ರಭ ವಾರ್ತೆ ಮಂಡ್ಯ
ಅರಕೇಶ್ವರ ಬಡಾವಣೆ ಮುಖ್ಯ ರಸ್ತೆಯಲ್ಲಿರುವ ಶ್ರೀಆಂಜನೇಯಸ್ವಾಮಿ ದೇವಾಲಯದ ಬಳಿ ಸೇರಿದ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು, ಧಾರ್ಮಿಕ ಹಿಂಸಾಚಾರ ವಿರೋಧಿಸಿ ಘೋಷಣೆ ಕೂಗಿದರು. ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಹಿತರಕ್ಷಣಾ ವೇದಿಕೆ ಸಂಚಾಲಕ ಹಾಲಹಳ್ಳಿ ವಸಂತಕುಮಾರ್ ಮಾತನಾಡಿ, ಬಾಂಗ್ಲಾದೇಶ ಸೇರಿದಂತೆ ಮುಸ್ಲಿಂ ರಾಷ್ಟಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಿರಂತರ ಹಲ್ಲೆ, ಗುಂಪು ಹಿಂಸಾಚಾರ, ಹತ್ಯೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.ಬಾಂಗ್ಲಾ ದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳ ನಡುವೆ, ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾ ಉಪಜಿಲ್ಲಾದಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಯುವಕ ಹಿಂದೂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಪ್ರತಿಭಟನಾಕಾರರು 30 ವರ್ಷದ ದೀಪುಚಂದ್ರ ದಾಸ್ ಅವರ ಮೃತದೇಹವನ್ನು ಸುಟ್ಟುಹಾಕಿದರು ಎಂದು ಆರೋಪಿಸಿದರು.
ಮುಖ್ಯರಸ್ತೆಯಲ್ಲಿ ಸಾಗಿದ ಪಂಜಿನ ಮೆರವಣಿಗೆಯು ಗುತ್ತಲು ಸರ್ಕಾರಿ ಶಾಲೆವರಗೆ ಸಾಗಿ, ಮಾನವ ಸರಪಳಿ ನಿರ್ಮಿಸಿ, ಸಂತಾಪ ಸೂಚಿಸಿ ಸಮಾಪ್ತಿಗೊಳಿಸಿದರು. ಅಪಾರ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.