ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ತಲಕಾವೇರಿ, ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಸೋಮವಾರ ಸಂಜೆಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿದ್ದು, ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆಯಾಗಿದೆ.ಭಾರಿ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಭಾಗಮಂಡಲ-ನಾಪೋಕ್ಲು ರಸ್ತೆ ಹಾಗೂ ಭಾಗಮಂಡಲ-ಮಡಿಕೇರಿ ರಸ್ತೆ ಮೇಲೆ ಪ್ರವಾಹದ ನೀರು ಹರಿದಿದೆ. ನಾಪೋಕ್ಲು ರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು, ಭಾಗಮಂಡಲದ ಆಟೋ ನಿಲ್ದಾಣ ಜಲಾವೃತಗೊಂಡಿದೆ.ಮಳೆ ಮತ್ತಷ್ಟು ತೀವ್ರಗೊಂಡರೆ ಭಾಗಮಂಡಲ ಸಂಪೂರ್ಣ ಜಲಾವೃತವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಆದರೂ ಮೇಲ್ಸೇತುವೆ ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗಿಲ್ಲ.ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನಲ್ಲಿ ಕಾಫಿ ತೋಟ ಹಾಗೂ ದಿನಸಿ ಅಂಗಡಿ ಮಳೆ ನೀರಿನಿಂದ ಜಲಾವೃತಗೊಂಡಿದೆ. ಮಡಿಕೇರಿಯ ಜಿಲ್ಲಾಸ್ಪತ್ರೆ ಹಿಂಭಾಗದ ಜಲಾಶಯ ಬಡಾವಣೆಗೆ ತೆರಳುವ ರಸ್ತೆಗೆ ಅಡ್ಡಲಾಗಿ ಮಣ್ಣು ಕುಸಿದಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ-76.60, ನಾಪೋಕ್ಲು-53.70, ಸಂಪಾಜೆ-105.90, ಭಾಗಮಂಡಲ-105.20, ವಿರಾಜಪೇಟೆ-37.90, ಅಮ್ಮತ್ತಿ-34.40, ಹುದಿಕೇರಿ-43.60, ಶ್ರೀಮಂಗಲ-29.50, ಪೊನ್ನಂಪೇಟೆ-14.20, ಬಾಳೆಲೆ-8.10, ಸೋಮವಾರಪೇಟೆ-22.30, ಶನಿವಾರಸಂತೆ -12.80, ಶಾಂತಳ್ಳಿ-46.80, ಕೊಡ್ಲಿಪೇಟೆ-9.50, ಕುಶಾಲನಗರ-16.10, ಸುಂಟಿಕೊಪ್ಪ-17.50 ಮಿ.ಮೀ ಮಳೆಯಾಗಿದೆ.
ಹಾರಂಗಿ ಜಲಾಶಯ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2858.45 ಅಡಿಗಳು. ಇಂದಿನ ನೀರಿನ ಒಳ ಹರಿವು 3638 ಕ್ಯುಸೆಕ್, ಇಂದಿನ ಹೊರ ಹರಿವು ನದಿಗೆ 4375 ಕ್ಯುಸೆಕ್. ನಾಲೆಗೆ 600 ಕ್ಯುಸೆಕ್.