ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಆಯೋಜಿಸಲಾಗಿದೆ.

ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲೆ, ಪದವಿ ಪೂರ್ವ, ಪದವಿ-ಸ್ನಾತಕೋತ್ತರ ಪದವಿ ಈ ಮೂರು ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸೆ. 8ರೊಳಗೆ ಆಯಾ ಶಾಲಾ-ಕಾಲೇಜು ಹಂತದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಸೆ. 10ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಡಿಕೇರಿ ಕಚೇರಿಗೆ ಪ್ರಬಂಧ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೆ. 8ರಂದು ಆಯಾ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ-ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಪ್ರಬಂಧ ಬರೆಯಿಸಿ ಪ್ರಬಂಧವನ್ನು ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರ ಮೂಲಕ ಕಳುಹಿಸುವಂತೆ ನಿರ್ದೇಶನ ನೀಡಿದರು. ತಜ್ಞರ ಸಮಿತಿಯು ಸೆ.10ರಂದು ಮೂರು ವಿಭಾಗದಲ್ಲಿ (ಪ್ರೌಢಶಾಲೆ, ಪದವಿ ಪೂರ್ವ, ಪದವಿ-ಸ್ನಾತಕೋತ್ತರ ಪದವಿ) ಆಯಾಯ ಹಂತದಲ್ಲಿ ಮೌಲ್ಯಮಾಪನ ಮಾಡಲಿದ್ದು, ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಮಾಹಿತಿ ನೀಡಿ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿಯನ್ನು ಅ. 2ರಂದು ಆಚರಿಸಲಾಗುತ್ತಿದ್ದು, ಮೂರು ವಿಭಾಗದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರೌಢಶಾಲಾ ವಿಭಾಗದಲ್ಲಿ ‘ಗಾಂಧೀಜಿ ಕಲಿಸಿದ ಸರಳ ಜೀವನ-ಮಹಾನ್ ಸಂದೇಶ’, ‘ನಾನು ಗಾಂಧೀಜಿಯಂತೆ ಸತ್ಯ ಹೇಳುವೆನು’, ‘ಗಾಂಧೀಜಿ ಜೀವನ ಕತೆಯಿಂದ ಕಲಿಯುವ ಐದು ಪಾಠಗಳು’ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 700ರಿಂದ 800 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು ಎಂದು ವಾರ್ತಾಧಿಕಾರಿ ವಿವರಿಸಿದರು.

ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ‘ಗಾಂಧೀಜಿ ದೃಷ್ಟಿಯಲ್ಲಿ ನಿಜವಾದ ಸ್ವಾತಂತ್ರ್ಯ’, ‘ಸತ್ಯ ಮತ್ತು ಅಹಿಂಸೆ-ನನ್ನ ಜೀವನದ ದಾರಿ’ ‘ಅಸಮಾನತೆ ನಿವಾರಣೆಗೆ ಗಾಂಧೀಜಿಯವರ ಕೊಡುಗೆ’ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 900ರಿಂದ 1000 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು ಎಂದರು.

ಪದವಿ-ಸ್ನಾತಕೋತ್ತರ ಪದವಿ ವಿಭಾಗದಲ್ಲಿ ‘ನೈತಿಕ ರಾಜಕಾರಣ-ಗಾಂಧೀಜಿಯ ತತ್ವಗಳ ಇಂದಿನ ಪ್ರಾಸಂಗಿಕತೆ’, ‘ಸತ್ಯಾಗ್ರಹ-ಇಂದಿನ ಕಾಲದ ಅವಶ್ಯತೆ’, ‘ಗಾಂಧೀಜಿಯ ಶಿಕ್ಷಣ ತತ್ವ-ನೈತಿಕತೆ, ಕೌಶಲ್ಯ, ಸೇವಾಭಾವ’ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 1400ರಿಂದ 1500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು ಎಂದು ವಾರ್ತಾಧಿಕಾರಿ ಚಿನ್ನಸ್ವಾಮಿ ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದಲ್ಲಿ ನಡೆಯುವ ಮೂರು ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕವಾಗಿ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ ಹಾಗೂ ತೃತೀಯ ಒಂದು ಸಾವಿರ ರು. ನಗದು ಬಹುಮಾನ ನೀಡಲಾಗುವುದು ಎಂದು ವಾರ್ತಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಮೂರು ವಿಭಾಗದಲ್ಲಿ ಆಯ್ಕೆಯಾದ ಪ್ರಥಮ ಬಹುಮಾನಿತರ ಮೂರು ಪ್ರಬಂಧವನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ 31 ಸಾವಿರ, ದ್ವಿತೀಯ ಸ್ಥಾನಕ್ಕೆ 21 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 11 ಸಾವಿರ ರು. ಬಹುಮಾನ ನೀಡಲಾಗುತ್ತದೆ ಎಂದರು. ಸೆ. 8ರೊಳಗೆ ಶಾಲೆ-ಕಾಲೇಜು ಹಂತದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಮುಖ್ಯೋಪಾಧ್ಯಾಯರು / ಪ್ರಾಂಶುಪಾಲರ ಮೂಲಕ ತರಿಸಿಕೊಂಡು ಪ್ರಬಂಧವನ್ನು ವಾರ್ತಾ ಇಲಾಖೆಗೆ ತಲುಪಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ರಾಘವ ಅವರು ತಿಳಿಸಿದರು.