ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಾದ್ಯಂತ ಸೋಮವಾರ ರಾತ್ರಿ ಬಿದ್ದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಮನೆಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ತಾಲೂಕಿನಾದ್ಯಂತ ಒಟ್ಟು ೨೧.೮೪ ಸೆಂಮೀ ಮಳೆಯಾಗಿದ್ದು, ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಮಂದಹಾಸ ಮೂಡಿದೆ.ಸೋಮವಾರ ರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಮಳೆಗೆ ಬಾಣಸಂದ್ರ ಗ್ರಾಪಂ ವ್ಯಾಪ್ತಿಯ ಕುಣಿಕೇನಹಳ್ಳಿ ಗ್ರಾಮದ ನಾಗರಾಜುರವರ ವಾಸದ ಮನೆ, ಬಾಣಸಂದ್ರ ಗ್ರಾಮದಲ್ಲಿನ ಲಕ್ಷ್ಮಣ ಮತ್ತು ಅಂಬಿಕಮ್ಮನವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿವೆ. ಹಾಗೂ ಕಾಳಮ್ಮ ಪುಟ್ಟಾಚಾರ್ ರವರ ದನದಕೊಟ್ಟಿಗೆ ಮೇಲೆ ತೆಂಗಿನ ಮರಬಿದ್ದು ಶೀಟುಗಳು ಮುರಿದಿವೆ. ದಂಡಿನಶಿವರ ಹೋಬಳಿಯ ತೋವಿನಕೆರೆ ಗ್ರಾಮದಲ್ಲಿ ನಂಜುಂಡಯ್ಯನವರ ಒಂದು ಮನೆ ಭಾಗಶಃ ಕುಸಿದು ಬಿದ್ದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಬೀಸಿದ ಬಿರುಗಾಳಿಗೆ ಕೋಳಘಟ್ಟ ೪, ನಾಯಕನಘಟ್ಟ ೨, ತೊರೆಮಾವಿನಹಳ್ಳಿ ೧, ಮಂಚೇನಹಳ್ಳಿ ೧, ಹರಿದಾಸನಹಳ್ಳಿ ೧, ತಂಡಗ ವ್ಯಾಪ್ತಿ ೨, ದೊಂಬರನಹಳ್ಳಿ ೨, ಮಾದಿಹಳ್ಳಿ ೪, ಬಸವನಹಳ್ಳಿ ೧, ನೆಮ್ಮದಿ ಗ್ರಾಮ ೧, ಸಿದ್ದಾಪುರ ೨, ಅಕ್ಕಳಸಂದ್ರ ೫, ತಳವಾರನಹಳ್ಳಿ ೧ ಸೇರಿ ಒಟ್ಟು ೨೬ ವಿದ್ಯುತ್ ಕಂಬಗಳು ಬಿದ್ದು ತುಂಡಾಗಿವೆ ಎಂದು ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್ ತಿಳಿಸಿದ್ದಾರೆ. ಪಟ್ಟಣ ಸೇರಿ ಈ ಗ್ರಾಮಗಳಲ್ಲಿ ರಾತ್ರಿ ವಿದ್ಯುತ್ ಇಲ್ಲದೇ ಜನರು ಪರದಾಡಿದರು.ಗ್ರಾಪಂನಲ್ಲಿ ವಾಸ: ತಾಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದಲ್ಲಿನ ಕೆಲ ಚರಂಡಿಗಳಲ್ಲಿ ಕಸ ಕಟ್ಟಿಕೊಂಡ ಪರಿಣಾಮ ಚಿಕ್ಕಕಲ್ಲಯ್ಯ ಅವರ ಮನೆಗೆ ಮಳೆ ನೀರು ನುಗ್ಗಿ ಮನೆಯ ವಸ್ತುಗಳೆಲ್ಲಾ ತೊಪ್ಪೆಯಾದವು ಹಾಗೂ ಮನೆಯಲ್ಲಿದ್ದ ಬಾಣಂತಿ ಮತ್ತು ಮಗುವನ್ನು ಗ್ರಾಮದ ಪಂಚಾಯತಿ ಕಚೇರಿಯಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಾಣಸಂದ್ರ ಹೆದ್ದಾರಿ ರೈಲ್ವೆ ಮೇಲು ಸೇತುವೆ ಕೆಳಗಿನ ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ನೀರು ನಿಂತು ಎರಡು ಗಂಟೆಯವರೆಗೂ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು. ಶಿಂಷಾ ನದಿ ತುರುವೇಕೆರೆ ಕೆರೆಯ ಮೂಲಕ ತುಂಬಿ ಹರಿಯುತ್ತಿದೆ. ತಾಲೂಕಿನ ಬೊಮ್ಮೇನಹಳ್ಳಿ, ಬಲಮಾದಿಹಳ್ಳಿ, ಕುಣಿಕೇನಹಳ್ಳಿ, ಹುಳಿಸಂದ್ರ, ಅಮ್ಮಸಂದ್ರ ಮತ್ತು ಕೋಳಾಲ ಕೆರೆಗಳು ತುಂಬಿವೆ ಎಂದು ಹೇಮಾವತಿ ನಾಲಾ ಅಧಿಕಾರಿಗಳು ತಿಳಿಸಿದ್ದಾರೆ. ಹಾನಿಯಾದ ಸ್ಥಳಕ್ಕೆ ತಹಸೀಲ್ದಾರ್ ಎಂ.ಎ.ಕುಂಞ ಅಹಮ್ಮದ್, ಬೆಸ್ಕಾಂ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.