ನವಲಗುಂದ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ಸುರಿದ ಮೃಗಶಿರಾ ಮಳೆ ಬಿತ್ತನೆ ಮಾಡಿದ ರೈತರಿಗೆ ಆಸರೆಯಾದರೆ, ಪಟ್ಟಣದಲ್ಲಿನ ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳು ನೀರಲ್ಲಿ ಮುಳುಗಿ ಜನ ಪರದಾಡುವಂತಾಯಿತು. ಈ ನಡುವೆ ಹಳ್ಳ ಉಕ್ಕೇರಿ ಹರಿದ ಪರಿಣಾಮ ಶಾಲೆ ಮಕ್ಕಳು ಸೇತುವೆಯ ಇನ್ನೊಂದು ಬದಿಯಲ್ಲೇ ನಿಲ್ಲುವಂತಾಗಿವೆ.
ಪಟ್ಟಣದ ಹೊರ ವಲಯದಲ್ಲಿರುವ ಇಬ್ರಾಹಿಂಪುರ ರಸ್ತೆಯಲ್ಲಿನ ಅಂಬಲಿ ಹಳ್ಳವು ತುಂಬಿ ಹರಿಯುತ್ತಿದ್ದು, ಇಬ್ರಾಹಿಂಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಳ್ಳದ ಆಚೆಯಿರುವ ಹುರಕಡ್ಲಿ ಕಲ್ಯಾಣ ಕೇಂದ್ರದ ಎಸ್.ಎಸ್. ಬಾಗಿ ಆಂಗ್ಲ ಮಾಧ್ಯ ಶಾಲೆಯ 196 ಮಕ್ಕಳು ಹಳ್ಳ ದಾಟಲಾಗದೇ ದಡದ ಆಚೆ ನಿಂತು ಪರದಾಡುವಂತಾಗಿದೆ. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಸುಧೀರ್ ಸಾಹುಕಾರ ಹಳ್ಳದ ಹರಿವು ಕಡಿಮೆಯಾದ ಮೇಲೆ ಸಾರಿಗೆ ಸಂಸ್ಥೆ ಸಹಾಯದಿಂದ ಮಕ್ಕಳನ್ನು ಪಟ್ಟಣಕ್ಕೆ ಕರೆ ತಂದರು. ನರಗುಂದ ಕ್ರಾಸ್ ಬಳಿಯ ಅಂಬಲಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ರೋಣ ಮಾರ್ಗ ಸಂಪೂರ್ಣ ಸ್ಥಗಿತಗೊಂಡಿದೆ.
ತಾಲೂಕಿನ ಗುಡಿಸಾಗರ, ನಾಗನೂರು, ಅಳಗವಾಡಿ, ಅಮರಗೋಳ, ಇಬ್ರಾಹಿಂಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಭಾರಿ ಮಳೆ ಸುರಿದಿದ್ದು, ಕೆಲ ಹೊಲಗಳಲ್ಲಿನ ಒಡ್ಡುಗಳು ಒಡೆದು ಹೊಲದ ತುಂಬೆಲ್ಲ ನೀರು ಹರಿದರೆ ಇನ್ನು ಸಣ್ಣ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ.ಪಟ್ಟಣವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಕೆಲವು ಗ್ರಾಮಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಳೆದ ಒಂದು ವಾರದಿಂದ ಬಿಸಿಲಿನ ವಾತಾವರಣವಿತ್ತು. ವಾರದ ಹಿಂದೆ ಹೆಸರು ಬೆಳೆಯನ್ನು ಬಿತ್ತಿದ ರೈತರು ಮಳೆಗಾಗಿ ಕಾಯುತ್ತಿದ್ದರು. ಆದರೆ, ಭಾನುವಾರ ಕೂಡಿಕೊಂಡ ಮೃಗಶಿರ ಮಳೆ ತಂಪೆರೆದಿದ್ದಲ್ಲದೆ ರೈತರ ಮುಂಗಾರು ಬೆಳೆಗೂ ಅನುಕೂಲವಾಗಿದೆ. ಆದರೆ, ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳಲ್ಲಿ ಸರಿಯಾಗಿ ನೀರು ಹರಿಯಲು ಮಾರ್ಗವಿಲ್ಲದಿರುವುದರಿಂದ ನೀರಲ್ಲಿಯೇ ನಿಲ್ಲುವಂತಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಸುಧೀರ ಸಾಹುಕಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.