ಡಂಬಳ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಠರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಕಾಯಿಲೆಯಿಂದಾಗುವ ಅಂಗವಿಕಲತೆ ಕಡಿಮೆ ಮಾಡುವುದು, ಇದಕ್ಕೆ ತುತ್ತಾದ ಜನರಿಗೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವುದು ಸಹ ಮುಖ್ಯವಾಗಿದೆ ಎಂದು ಡಾ. ಆನಂದ ಕಗ್ಗೋಡ ಹೇಳಿದರು.ಡಂಬಳ ಹೋಬಳಿಯ ಜಂತಲಿ ಶಿರೂರ ಗ್ರಾಮ ಪಂಚಾಯ್ತಿಯಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ. 30ರಿಂದ ಫೆ.13ರ ವರೆಗೆ 15 ದಿನಗಳ ಕಾಲ ಸ್ಪರ್ಶ ಕುಷ್ಠರೋಗ ಜಾಗೃತಿ ಆಂದೋಲನ ನಡೆಯುತ್ತಲಿದೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಠರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಕಾಯಿಲೆ ಕುರಿತು ಸಮಾಜದಲ್ಲಿರುವ ಕೀಳರಿಮೆ ಹೋಗಲಾಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಬೇಕಾಗಿದೆ. ಈ ಬಾರಿ ಕುಷ್ಠರೋಗ ಜಾಗೃತಿ ಆಂದೋಲನದ ಘೋಷಣಾ ವಾಕ್ಯ ಕಳಂಕವನ್ನು ಕೊನೆಗೊಳಿಸಿ ಘನತೆಯನ್ನು ಎತ್ತಿಹಿಡಿಯೋಣ ಎಂಬುದಾಗಿದೆ. ಈ ಆಂದೋಲನ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ರೋಗದ ಬಗ್ಗೆ ಅರಿವು ಮೂಡಿಸಿ ರೋಗವನ್ನು ಶೀಘ್ರಪತ್ತೆ ಹಚ್ಚುವ ಮೂಲಕ ಅಂಗವಿಕಲತೆ ಕಡಿಮೆ ಮಾಡುವುದು ಪ್ರಮುಖವಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ರವಿ ದೊಡ್ಡಮನಿ ಮಾತನಾಡಿ, ಕುಷ್ಠರೋಗ ಮುಕ್ತಭಾರತ ಮಾಡುವಲ್ಲಿ ನಮ್ಮೆಲ್ಲರ ಸಹಕಾರ ಇದ್ದೇ ಇರುತ್ತದೆ, ಈ ಸಾಂಕ್ರಾಮಿಕ ರೋಗವಾದ ಕುಷ್ಠರೋಗವನ್ನು ಹೋಗಲಾಡಿಸಲು ಅದರ ಬಗ್ಗೆ ಅರಿವು ಬಹಳ ಪ್ರಮುಖವಾದದ್ದು, ಆ ಕೆಲಸವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮಾಡುತ್ತಿದ್ದಾರೆ. ಇನ್ನು ಮುಂದೆ ನಾವೂ ಕೂಡ ಗಾಂಧೀಜಿಯವರ ಕನಸನ್ನು ನನಸು ಮಾಡಲು ಎಲ್ಲಾರು ಮುಂದಾಗಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ ಕಲಕಂಬಿ, ಪಿಡಿಒ ವಸಂತ ಗೋಕಾಕ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸೋಮಶೇಖರ ವೀರೇಶಣ್ಣರ, ಗ್ರಾಪಂ ಬಿಲ್ಕಲೆಕ್ಟರ ಬಸುರಾಜ ಮೇವುಂಡಿ, ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ ಗುರಿಕಾರ, ಆಶಾಕಾರ್ಯಕರ್ತೆಯರಾದ ಸುಮಂಗಲಾ ಡಂಬಳ, ವಿಜಯಲಕ್ಷ್ಮೀ ಪಾಟಿಲ, ಅಕ್ಷತಾ ಹಡಪದ, ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಇದ್ದರು.