ಭೂತದ ಬಂಗಲೆಯಂತೆ ಭಾಸವಾಗುತ್ತಿರುವ ಪ್ರವಾಸಿ ಮಂದಿರ ಕಟ್ಟಡ

KannadaprabhaNewsNetwork |  
Published : Mar 10, 2026, 03:30 AM IST
ಮುಂಡಗೋಡ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಸಾರಾ ಸಗಟಾಗಿ ಉದ್ಘಾಟನೆ ಮಾಡಿರುವುದರಲ್ಲಿ ಒಂದಾದ ಮುಂಡಗೋಡ ಪ್ರವಾಸಿ ಮಂದಿರ ಕಟ್ಟಡ ವಾಸ್ತವವಾಗಿ ಬೀಗ ಜಡಿದುಕೊಂಡು  ಭೂತ ಬಂಗಲೆಯಂತೆ ಬಾಸವಾಗುತ್ತಿದೆ. | Kannada Prabha

ಸಾರಾಂಶ

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಿರುವುದರಲ್ಲಿ ಒಂದಾದ ಮುಂಡಗೋಡ ಪ್ರವಾಸಿ ಮಂದಿರ ಕಟ್ಟಡ ವಾಸ್ತವವಾಗಿ ಬೀಗ ಜಡಿದುಕೊಂಡು ಭೂತ ಬಂಗಲೆಯಂತೆ ಭಾಸವಾಗುತ್ತಿದೆ.

ಸುಮಾರು ₹೨ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ

ಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಿರುವುದರಲ್ಲಿ ಒಂದಾದ ಮುಂಡಗೋಡ ಪ್ರವಾಸಿ ಮಂದಿರ ಕಟ್ಟಡ ವಾಸ್ತವವಾಗಿ ಬೀಗ ಜಡಿದುಕೊಂಡು ಭೂತ ಬಂಗಲೆಯಂತೆ ಭಾಸವಾಗುತ್ತಿದೆ.

ಸುಮಾರು ₹೨ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರ ಹೈಟೆಕ್ ಎಂದು ಹೇಳಲ್ಪಟ್ಟಿದೆ. ಮುಖ್ಯಮಂತ್ರಿಗಳಿಂದ ಪ್ರವಾಸಿ ಮಂದಿರ ಉದ್ಘಾಟಿಸುವ ವಿಚಾರ ಗೊತ್ತಿದ್ದರೂ ಕನಿಷ್ಠ ಪಕ್ಷ ತಳಿರು-ತೋರಣ ಕಟ್ಟುವುದಾಗಲಿ, ಒಳಭಾಗ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರ ಆರೋಪ. ಉದ್ಘಾಟನೆಗೆ ಕನಿಷ್ಠ ಮಟ್ಟದ ಸಿದ್ಧತೆ ಮಾಡಿಕೊಳ್ಳದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಈ ಕಟ್ಟಡವನ್ನು ಎಷ್ಟು ಜತನದಿಂದ ನಿರ್ವಹಿಸಬಹುದು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ಕಟ್ಟಡದ ಸುತ್ತಲೂ ಹಬ್ಬಿರುವ ಗಿಡ-ಗಂಟಿಗಳು, ಅಲ್ಲಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಕೊಠಡಿ ಒಳಗಡೆ ಕಾಣುವ ಜೇಡರ ಬಲೆಗಳು, ಒಳಕೋಣೆಗಳಲ್ಲಿ ಸಂಗ್ರಹಗೊಂಡಿರುವ ಗುಜರಿ ಸಾಮಗ್ರಿಗಳು ಇಲಾಖೆಯ ನಿರ್ಲಕ್ಷ್ಯತನದ ಕಾರ್ಯವೈಖರಿಗೆ ಸಾಕ್ಷಿಯಾಗಿವೆ. ಉದ್ಘಾಟನೆಯ ಸಂದರ್ಭದಲ್ಲಿಯಾದರೂ ಈ ಕಟ್ಟಡ ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕಿತ್ತು ಎಂಬುದು ಜನರ ಅಭಿಪ್ರಾಯ.

ಈಗಾಗಲೇ ಇರುವ ಪ್ರವಾಸಿ ಮಂದಿರ ಕೊಠಡಿಗಳೇ ಸ್ವಚ್ಛತೆ ಹಾಗೂ ಸಮರ್ಪಕ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿವೆ. ಇಂತಹ ಪರಿಸ್ಥಿತಿಯಲ್ಲಿ ಹೈಟೆಕ್ ಪ್ರವಾಸಿ ಮಂದಿರ ಕಟ್ಟಡ ಉದ್ಘಾಟನೆಗೊಂಡಿದೆ. ಅದು ಕೂಡ, ನಾಮ ಕೆ ವಾಸ್ತೆ ಎಂಬಂತೆ ಕಾರವಾರದಲ್ಲಿ ಮುಖ್ಯಮಂತ್ರಿಯಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿಸಲಾಗಿದೆ. ಈ ಕಟ್ಟಡದ ಬಾಗಿಲು ತೆರೆಯದೆ ಹಾಳುಗೆಡುವ ಸಾಧ್ಯತೆ ಇದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.ಶಾಸಕರ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಜಿಲ್ಲಾ ಪ್ರವಾಸಕ್ಕೆ ಬಂದ ವೇಳೆಯಲ್ಲಿ ಪ್ರವಾಸಿ ಮಂದಿರ ಕಟ್ಟಡ ಉದ್ಘಾಟನೆ ಮಾಡಿಸಲಾಗಿದೆ. ಇನ್ನು ಕೆಲವಷ್ಟು ಪೀಠೋಕರಣ ಹಾಗೂ ಹಾಸಿಗೆ ಮುಂತಾದ ವಸ್ತುಗಳು ಬರಬೇಕಿದ್ದು, ಬಂದ ತಕ್ಷಣ ಕಾರ್ಯಾರಂಭವಾಗಲಿದೆ ಎನ್ನುತ್ತಾರೆ ಲೋಕೋಪಯೋಗಿ ಎಇಇ ಮಹಾದೇವಪ್ಪ ಹ್ಯಾಟಿ.

ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳಿಸಬೇಕಾದರೆ ಕಟ್ಟಡವನ್ನು ಶೃಂಗಾರಗೊಳಿಸುವುದು ಹೋಗಲಿ, ಕನಿಷ್ಠ ಪಕ್ಷ ಸ್ವಚ್ಛಗೊಳಿಸುವ ಕೆಲಸ ಕೂಡ ಮಾಡದೆ ಉದ್ಘಾಟನೆ ಕಾರ್ಯ ಪೂರ್ಣಗೊಳಿಸಿರುವುದು ಅವಮಾನಕರ ಸಂಗತಿ. ಅಲ್ಲದೇ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡದ ಖರ್ಚು-ವೆಚ್ಚದ ಬಗ್ಗೆ ತನಿಖೆ ನಡೆಸಿ ಬಹಿರಂಗಪಡಿಸಬೇಕಿದೆ ಪಪಂ ಮಾಜಿ ಉಪಾಧ್ಯಕ್ಷ ವಾದಿರಾಜ ರಾವ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ