ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಾಸೀಟು, ಅಬ್ಬಿಫಾಲ್ಸ್, ದುಬಾರೆ, ನಿಸರ್ಗಧಾಮ ಸೇರಿದಂತೆ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಭಾನುವಾರ ಪ್ರವಾಸಿಗರ ದಂಡು ಕಂಡು ಬಂತು. ಪೊಲೀಸರಿಗೆ ಟ್ರಾಫಿಕ್ ನಿಭಾಯಿಸುವುದೇ ಕಷ್ಟವಾಯಿತು. ರಾಜ್ಯದ ಪ್ರವಾಸಿಗರಿಗಿಂತ ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ಹೊರರಾಜ್ಯದ ಪ್ರವಾಸಿಗರೇ ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದರು. ಪ್ರವಾಸಿಗರಿಂದಾಗಿ ಕೊಡಗಿನ ಎಲ್ಲ ಹೋಂಸ್ಟೇ, ರೆಸಾರ್ಟ್, ಹೊಟೇಲ್ ಗಳು ಹೌಸ್ ಫುಲ್ ಆಗಿವೆ. ಜನವರಿ ಮೊದಲವಾರ ಮುಗಿಯುವವರೆಗೂ ಬುಕ್ಕಿಂಗ್ ಆಗಿದೆ. ಇದೇ ವೇಳೆ, ಕರಾವಳಿ ಭಾಗದ ಸಮುದ್ರ ತೀರ, ಶರಾವತಿ ನದಿಯ ಬೋಟಿಂಗ್ ಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಜನ ಮೋಜು, ಮಸ್ತಿಯಲ್ಲಿ ತೊಡಗಿದ್ದರು.
ವಿಶ್ವ ಪರಂಪರೆ ತಾಣ ಹಂಪಿಗೆ ಭಾನುವಾರ ಕೂಡ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿ ಸ್ಮಾರಕಗಳನ್ನು ವೀಕ್ಷಿಸಿ ಖುಷಿಪಟ್ಟರು. ಹಂಪಿಯ ಗೆಜ್ಜಲ ಮಂಟಪದಿಂದ ಬ್ಯಾಟರಿ ಚಾಲಿತ ವಾಹನಗಳು ಸಮಯಕ್ಕೆ ಸರಿಯಾಗಿ ದೊರೆಯದೇ ಹಲವು ಪ್ರವಾಸಿಗರು ನಡೆದುಕೊಂಡೇ ವಿಜಯ ವಿಠಲ ದೇವಾಲಯ, ಕಲ್ಲಿನತೇರು, ಸಪ್ತಸ್ವರ ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುರುಡೇಶ್ವರ, ಹೊನ್ನಾವರ, ಗೋಕರ್ಣ, ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸ್ಥಳಗಳಾದ ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು, ಚಿಕ್ಕಮಗಳೂರಿನ ಶೃಂಗೇರಿ, ಮುಳ್ಳಯ್ಯನ ಗಿರಿಗಳಿಗೂ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಮಡಿಕೇರಿ, ಮೈಸೂರು, ಊಟಿ, ಕೇರಳಕ್ಕೆ ಹೋಗುತ್ತಿರುವ ಪ್ರವಾಸಿಗರಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.