ಪ್ರವಾಸಿಗರು ಬದಲಿ ರಸ್ತೆ ಬಳಸಿ ಸಹಕರಿಸಲು ಮನವಿ

KannadaprabhaNewsNetwork | Published : Oct 28, 2024 1:08 AM

ಸಾರಾಂಶ

ಕೊಪ್ಪ, ಅತ್ತಿಕೊಡಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೊಗ್ರೆ ಬಿಳಾಲುಕೊಪ್ಪ, ಬಸರಿಕಟ್ಟೆ ರಸ್ತೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಗುಡ್ಡದ ಝರಿಯಿಂದ ನಿರಂತರ ನೀರು ಒಸರಿ ಬರುತ್ತಿರುವ ಕಾರಣ ಮಳೆ ನಿಲ್ಲದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅತ್ತಿಕೊಡಿಗೆ ಪಂಚಾಯತಿ ಅಧ್ಯಕ್ಷ ಟಿ.ಗೋಪಾಲ ಕೃಷ್ಣ ತಿಳಿಸಿದ್ದಾರೆ.

ಹಿಂಗಾರು ಮಳೆ ಸುರಿಯುತ್ತಿದ್ದು ಅತಿವೃಷ್ಟಿಯಿಂದ ರಸ್ತೆ ಹಾಳಾಗಿದೆ: ಗೋಪಾಲ ಕೃಷ್ಣ

ಕನ್ನಡಪ್ರಭ ವಾರ್ತೆ, ಕೊಪ್ಪ

ಅತ್ತಿಕೊಡಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೊಗ್ರೆ ಬಿಳಾಲುಕೊಪ್ಪ, ಬಸರಿಕಟ್ಟೆ ರಸ್ತೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಗುಡ್ಡದ ಝರಿಯಿಂದ ನಿರಂತರ ನೀರು ಒಸರಿ ಬರುತ್ತಿರುವ ಕಾರಣ ಮಳೆ ನಿಲ್ಲದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅತ್ತಿಕೊಡಿಗೆ ಪಂಚಾಯತಿ ಅಧ್ಯಕ್ಷ ಟಿ.ಗೋಪಾಲ ಕೃಷ್ಣ ತಿಳಿಸಿದ್ದಾರೆ.ಇತ್ತೀಚೆಗೆ ರಸ್ತೆ ಹಾಳಾಗಿದೆ ಎಂದು ಸ್ಥಳೀಯ ಬಿಜೆಪಿಯವರು ಪ್ರತಿಭಟನೆ ನಡೆಸಿ ಪಿಡಬ್ಲ್ಯೂಡಿ ಇಲಾಖೆ, ಸ್ಥಳೀಯ ಶಾಸಕರು ಹಾಗೂ ಸರ್ಕಾರವೇ ರಸ್ತೆ ಹಾಳಾಗಲು ಕಾರಣ ಎನ್ನುವಂತೆ ಬಿಂಬಿಸುವುದು ಸರಿಯಲ್ಲ, ಪ್ರಸ್ತುತ ವರ್ಷದಲ್ಲಿ ಅತಿಯಾಗಿ ಸುರಿದ ಮುಂಗಾರು ಮಳೆಯನ್ನೇ ಮೀರಿಸು ವಂತೆ ಹಿಂಗಾರು ಮಳೆ ಸುರಿಯುತ್ತಿದ್ದು ಅತಿವೃಷ್ಟಿಯಿಂದ ರಸ್ತೆ ಹಾಳಾಗಿದೆ ಎನ್ನುವ ಸತ್ಯ ಜನಸಾಮಾನ್ಯರಿಗೂ ತಿಳಿದಿದೆ ಎಂದ ಅವರು ದಿನ ನಿತ್ಯ ಸಂಚರಿಸುವ ಎರಡು ಖಾಸಗಿ ಬಸ್ಸುಗಳು ಎಂದಿನಂತೆ ಓಡಾಡುತ್ತಿದ್ದು ಕೆಕೆಬಿ ಸಂಸ್ಥೆ ಬಸ್ ಮಾತ್ರ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಿದೆ. ಪ್ರವಾಸಿ ವಾಹನಗಳು ಈ ರಸ್ತೆ ಮೂಲಕ ಹೆಚ್ಚು ಓಡಾಡುವುದರಿಂದ ಹೆಚ್ಚಿನ ಒತ್ತಡ ರಸ್ತೆ ಹದಗೆಡಲು ಕಾರಣವಾಗಲಿದೆ. ಆದ್ದರಿಂದ ಪ್ರವಾಸಿ ವಾಹನಗಳು ಕೆಲವು ಸಮಯ ಪರ್ಯಾಯ ಬದಲಿ ರಸ್ತೆ ಬಳಸುವುದು ಅನಿವಾರ್ಯವಾಗಲಿದೆ.ಶೃಂಗೇರಿ, ಹೊರನಾಡು ಕಡೆಯಿಂದ ಹಾಗೂ ಕೊಪ್ಪ ಭಾಗದಿಂದ ಓಡಾಡುವ ಪ್ರವಾಸಿ ವಾಹನಗಳು ಜಯಪುರ, ಹೇರೂರು ರಸ್ತೆ ಬಳಸಿ ಬಸ್ರಿಕಟ್ಟೆ ಮುಖೇನ ಹೊರನಾಡು ತಲುಪಬಹುದು, ಅಥವಾ ಮಕ್ಕಿಕೊಪ್ಪ , ಕೊಗ್ರೆ, ಮೆಣಸಿನಹಾಡ್ಯ ರಸ್ತೆಯ ಮುಖೇನ ಹೊರಾನಾಡು ತಲುಪುವಂತೆ ಬದಲಿ ರಸ್ತೆ ಬಳಸಿ ಸಹಕರಿಸಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Share this article