ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಶನಿವಾರ ಹಾಗೂ ಭಾನುವಾರ ಎರಡು ದಿನಗಳಲ್ಲೇ ವೀಕೆಂಡ್‌ನಲ್ಲಿ 30 ಸಾವಿರಕ್ಕೂ ಅಧಿಕ ದೇಶ, ವಿದೇಶಿ ಪ್ರವಾಸಿಗರು ಹರಿದು ಬಂದಿದ್ದಾರೆ.ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ಜೊತೆಗೆ ರೈಲು ಮಾದರಿ ವಾಹನದ ವ್ಯವಸ್ಥೆ ಕೂಡ ಮಾಡಲಾಗಿದೆ. ಹಂಪಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ವಿಜಯ ವಿಠಲ ದೇವಾಲಯದ ಬಳಿ ಬ್ಯಾಟರಿ ಚಾಲಿತ ವಾಹನಗಳ ಕೊರತೆ ಬಿದ್ದ ಕಾರಣ ರೈಲು ಮಾದರಿ ವಾಹನ ಓಡಿಸಿ ವ್ಯವಸ್ಥೆ ಕೂಡ ಮಾಡಲಾಯಿತು. ಇದರಿಂದ ಪ್ರವಾಸಿಗರಿಗೂ ತಕ್ಕ ಮಟ್ಟಿಗೆ ಅನುಕೂಲವಾಗಿದೆ.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪ ಮಂಟಪ, ಕಡಲೆ ಕಾಳು ಗಣೇಶ ಮಂಟಪ, ಶ್ರೀ ಕೃಷ್ಣ ದೇವಾಲಯ, ಹಜಾರ ರಾಮ ದೇವಾಲಯ, ಆನೆಲಾಯ, ಕಮಲ ಮಹಲ್, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರದಾಸರ ಮಂಟಪ, ವರಾಹ ದೇವಾಲಯ, ರಾಮ, ಲಕ್ಷ್ಮಣ ದೇಗುಲ, ಸುಗ್ರೀವ ಗುಹೆ, ಪಾನ್ ಸುಫಾರಿ ಬಜಾರ, ಶ್ರೀಕೃಷ್ಣ ಬಜಾರ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು. ಇನ್ನೂ ತುಂಗಭದ್ರಾ ನದಿಯಲ್ಲಿ ಚಕ್ರತೀರ್ಥದ ಬಳಿ ಪ್ರವಾಸಿಗರು ಹರಿಗೋಲು ಸವಾರಿ ಕೂಡ ನಡೆಸಿದರು. ಪ್ರವಾಸಿಗರ ದಂಡು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹಂಪಿ ಸ್ಮಾರಕಗಳ ಬಳಿ ಪ್ರವಾಸಿಗರು ಕಂಡು ಬಂದರು.
ಹಂಪಿಯ ಸ್ಮಾರಕಗಳ ಸೊಬಗನ್ನು ವೀಕ್ಷಿಸಿದ ಪ್ರವಾಸಿಗರು ಸ್ಮಾರಕಗಳ ಬಗ್ಗೆ ಹಾಗೂ ವಿಜಯನಗರ ಚರಿತ್ರೆಯನ್ನು ಮಾರ್ಗದರ್ಶಕರಿಂದ ಮಾಹಿತಿ ಕೂಡ ಪಡೆದುಕೊಂಡರು. ಪ್ರವಾಸೋದ್ಯಮದಿಂದ ಈ ಭಾಗದಲ್ಲಿ ಉದ್ಯೋಗ ಕೂಡ ಸೃಷ್ಟಿಯಾಗಿದೆ. ಆಟೋ, ಟ್ಯಾಕ್ಸಿ ಚಾಲಕರು, ಗೈಡ್‌ಗಳು, ಹೋಟೆಲ್, ರೆಸಾರ್ಟ್‌ಗಳಿಗೂ ಅನುಕೂಲ ಆಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕೂಡ ಸೃಷ್ಟಿಯಾಗಿದೆ.ಹಂಪಿ ಸ್ಮಾರಕಗಳ ವೀಕ್ಷಣೆಗೆ ಶಾಲಾ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಂಪಿ ರಾಣಿ ಸ್ನಾನ ಗೃಹ, ವಿಜಯ ವಿಠಲ ದೇವಾಲಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಹಂಪಿಯ ತುಂಗಭದ್ರಾ ನದಿ ತೀರದಲ್ಲಿ ಪೊಲೀಸರು ಕೂಡ ಗಸ್ತು ತಿರುಗಿ ನದಿಯಲ್ಲಿ ಸ್ನಾನಕ್ಕೆ ಇಳಿಯದಂತೆ ಜಾಗೃತಿ ಮೂಡಿಸುತ್ತಿರುವುದು ಕೂಡ ಕಂಡು ಬಂದಿತು.