ಟೌನ್ ಕೋ ಆಪರೇಟಿವ್ ಸೊಸೈಟಿಗೆ 18.28 ಲಕ್ಷ ರು ಲಾಭ

KannadaprabhaNewsNetwork |  
Published : Jun 16, 2025, 12:56 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ 108ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯನ್ನು ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಕಳೆದ ಸಾಲಿನಲ್ಲಿ 18.28 ಲಕ್ಷ ರು. ಲಾಭ ಗಳಿಸಿದೆ ಎಂದು ಎಂದು ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ತಿಳಿಸಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ 2024-15ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿ ಕಟ್ಟಡದ ಮೇಲೆ 5 ಸಾವಿರ ಚದರ ಅಡಿಯಲ್ಲಿ 1.57 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಸಮುದಾಯ ಭವನ ಕಟ್ಟಲು ತೀರ್ಮಾನಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

ಸೊಸೈಟಿಯಲ್ಲಿ 49.88 ಲಕ್ಷ ರು.ಗಳ ಷೇರು ಬಂಡವಾಳವಿದ್ದು, 2,613 ಸದಸ್ಯರನ್ನು ಒಳಗೊಂಡಿರುವ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಸ್ವಂತ ಕಟ್ಟಡವನ್ನು ಹೊಂದಿದೆ. ಬೇರೆ ಯಾವ ಸಹಕಾರ ಸಂಸ್ಥೆಗೂ ಸ್ವಂತ ಕಟ್ಟಡವಿಲ್ಲ. 29.18 ಲಕ್ಷ ರು. ವಿವಿಧ ಬ್ಯಾಂಕು ಹಾಗೂ ಸಂಸ್ಥೆಗಳಲ್ಲಿ ತೊಡಗಿಸಿದೆ. ಹೆಚ್ಚು ಠೇವಣಿಯನ್ನು ಸದಸ್ಯರು ಸೊಸೈಟಿಯಲ್ಲಿ ತೊಡಗಿಸಿ ಬಲಪಡಿಸುವಂತೆ ಎಂ.ನಿಶಾನಿ ಜಯಣ್ಣ ಮನವಿ ಮಾಡಿದರು.

ಷೇರು ಹಣ ಒಂದು ಸಾವಿರ ರು.ಗಳನ್ನು 5 ಸಾವಿರ ರು.ಗಳಿಗೆ ಹೆಚ್ಚಿಸಲು ಕಳೆದ ವಾರ್ಷಿಕ ಮಹಾಸಭೆಯಲ್ಲಿ ಸೊಸೈಟಿಯ ಸಮಗ್ರ ನಿಯಮಗಳಿಗೆ ತಿದ್ದುಪಡಿ ಮಾಡಿ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿತ್ತು ಎಂದು ಸದಸ್ಯರ ಗಮನಕ್ಕೆ ತಂದಾಗ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ಸಾಲಗಾರರು ಸಮಯಕ್ಕೆ ಸರಿಯಾಗಿ ಕಂತು ಮತ್ತು ಬಡ್ಡಿಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಜಾಮೀನುದಾರರ ಮೇಲೆ ಸಾಲಗಾರರಷ್ಟೆ ಜವಾಬ್ದಾರಿಯಿದೆ. ಹಾಗಾಗಿ ನಿಯಮಿತ ಅವಧಿಯೊಳಗೆ ಸಾಲ ಮರುಪಾವತಿಸಿ ಸೊಸೈಟಿಯ ಅಭಿವೃದ್ಧಿಗೆ ಕೈಜೋಡಿಸುವಂತೆ ಎಂ.ನಿಶಾನಿ ಜಯಣ್ಣ ಮನವಿ ಮಾಡಿದರು.

ಸದಸ್ಯರಿಂದ ಇನ್ನೂ ಹೆಚ್ಚಿನ ಠೇವಣಿ ಹಣ ಸಂಗ್ರಹ ಮಾಡಲು ಉದ್ದೇಶಿಸಿದ್ದು, ಸದಸ್ಯರಿಗೆ ಈಗಾಗಲೆ ಗೃಹ ಸಾಲ, ಆಧಾರ ಸಾಲ, ವಾಹನ ಸಾಲ, ಶ್ಯೂರಿಟಿ ಸಾಲ, ಬಂಗಾರದ ಮೇಲೆ ಹಾಗೂ ಕ್ಯಾಷ್ ಕ್ರೆಡಿಟ್ ಸಾಲ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯನ್ನು ಲಾಭದತ್ತ ತೆಗೆದುಕೊಂಡು ಹೋಗಬೇಕು. ಅದಕ್ಕಾಗಿ ಕನಿಷ್ಠ ವ್ಯವಹಾರ ನಡೆಸುವಂತೆ ಹೇಳಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಎನ್.ಎಂ.ಪುಷ್ಪವಲ್ಲಿ, ನಿರ್ದೇಶಕರಾದ ಸಿ.ಎಚ್.ಸೂರ್ಯಪ್ರಕಾಶ್, ಬಿ.ವಿ.ಶ್ರೀನಿವಾಸಮೂರ್ತಿ, ಲಿಯಾಖತ್ ಅಲಿಖಾನ್, ಸಾಧಿಕ್‌ ಬಾಷಾ, ಜಿ.ಸುರೇಶ್‌ಕುಮಾರ್, ಜೆ.ಆರ್.ಹರೀಶ್‌ಬಾಬು, ನಿಶಾನಿ ದಶರಥ್, ಓ.ತಿಪ್ಪೇಸ್ವಾಮಿ, ಚಂದ್ರಪ್ಪ, ಎ.ಚಂಪಕ ಇವರುಗಳು ವೇದಿಕೆಯಲ್ಲಿದ್ದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕ ಗಳಿಸಿರುವ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್‌ಅವರನ್ನು ಸನ್ಮಾನಿಸಲಾಯಿತು. ಸೊಸೈಟಿಯ ಪ್ರಭಾರೆ ಕಾರ್ಯದರ್ಶಿ ಪಿ.ಮಂಜುನಾಥ್‌ಗೌಡ ವರದಿ ಮಂಡಿಸಿದರು. ಆರ್ಥಿಕ ಸಲಹೆಗಾರ ಮಹಮದ್ ನಯೀಮ್ ಹಾಗೂ ಸಿಬ್ಬಂದಿಯವರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!