ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಬೇಸಿಗೆ ಸಮಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕೈಗೊಳ್ಳ ಬಹುದಾದ ಕಾರ್ಯಗಳ ಬಗ್ಗೆ ಚರ್ಚಿಸಲು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳ ಸಭೆ ನಡೆಯಿತು.ಶಾಸಕ ಸೂಚನೆಯಂತೆ ಸಭೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಆಯೋಜಿಸಿದ್ದರು. ತಾಲೂಕಿನಾದ್ಯಂತೆ ಜೆಜೆಎಂ ಮತ್ತು ಅಮೃತ್ ಯೋಜನೆಯ ಕುಡಿಯುವ ನೀರು ಸರಬರಾಜು ಯೋಜನೆ ವಿಫಲವಾಗಿರುವ ಬಗ್ಗೆ ಅಧ್ಯಕ್ಷರು ಮತ್ತು ಪಿಡಿಒಗಳು ಸಭೆಯ ಗಮನಕ್ಕೆ ತಂದರು. ಕೇಂದ್ರ ಸರ್ಕಾರದ ಶುದ್ಧ ಕುಡಿಯುವ ನೀರಿನ ಯೋಜನೆ ಕೆಲವು ವರ್ಷಗಳಿಂದ ನಡೆಯುತ್ತಿದೆ. ಆದರೆ, ಯಾವುದೇ ಗ್ರಾಮಗಳಲ್ಲಿ ಕಾಮಗಾರಿ ಮುಗಿಸಿ ನೀರು ಸರಬರಾಜಾಗುತ್ತಿಲ್ಲ. ಬೇಸಿಗೆ ಪ್ರಾರಂಭವಾಗಿರುವುದರಿಂದ ಕೂಡಲೇ ಯೋಜನಾ ಕಾಮಗಾರಿಯನ್ನು ಮುಗಿಸಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದರು.
ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೀಕೇಜ್ ಆಗುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು. ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇಂದಿಗೂ ಕಾಮಗಾರಿ ಮುಗಿಸಿ ನೀರು ನೀಡಿಲ್ಲ. ನಮಗೆ ಇನ್ನು ಕೇವಲ 6 ತಿಂಗಳು ಮಾತ್ರ ಕಾಲಾವಧಿ ಇದ್ದು, ನಮ್ಮ ಅವಧಿಯಲ್ಲಿ ಯೋಜನೆ ಮುಗಿಸಿ ನೀರು ನೀಡುವುದಿಲ್ಲ. ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ. ಎಂದು ಉಪಾಧ್ಯಕ್ಷ ಚಂದ್ರಮೋಹನ್ ಅಸಹಾಯಕತೆ ವ್ಯಕ್ತಪಡಿಸಿದರು.ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜೆಜೆಎಂ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಒಂದೆರಡು ತಿಂಗಳಿನಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಕೇಂದ್ರ ಸರ್ಕಾರ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 303 ಕೋಟಿ ರು. ವೆಚ್ಚದ ಬೃಹತ್ ಕುಡಿಯುವ ನೀರು ಸರಬರಾಜು ಯೋಜನೆಗೆ ಮುಂದಾಗಿದ್ದು, ಈ ಯೋಜನೆ ಕಾರ್ಯಗತವಾದಲ್ಲಿ ಎಲ್ಲರಿಗೂ ಏಕ ಕಾಲಕ್ಕೆ ನೀರು ಸರಬರಾಜು ಮಾಡುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಭಿಯಂತರರು ಸಭೆಗೆ ತಿಳಿಸಿದರು.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು ಮತ್ತು ಯಡವಾರೆ ಗ್ರಾಮಗಳಲ್ಲಿ ಇಂದಿಗೂ ಕಾಮಗಾರಿ ಮುಗಿಸಿಲ್ಲ. ಎರಡು ಕೊಳವೆ ಬಾವಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಮಾಡದೆ, ಸಮಸ್ಯೆಯಾಗಿದೆ. ಹಾಕಿರುವ ಎಚ್.ಡಿ. ಪೈಪ್ ಒಡೆದಲ್ಲಿ ಅದನ್ನು ರಿಪೇರಿ ಮಾಡಲು 15 ದಿನಗಳು ಬೇಕಾಗುತ್ತದೆ. ಕೆಲವೆಡೆ ರಸ್ತೆ ಬದಿಯಲ್ಲಿ ಪೈಪ್ ಅಳವಡಿಸಿದರೂ, ರಸ್ತೆ ವಿಸ್ತರಣೆಯಾಗುತ್ತಿರುವುದರಿಂದ ಪೈಪ್ ರಸ್ತೆ ಮಧ್ಯೆ ಬರುತ್ತದೆ ಎಂದು ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಸಭೆಯ ಗಮನಕ್ಕೆ ತಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಎಲ್ಲ ಪಂಚಾಯಿತಿಗಳಲ್ಲಿ ಪಿಡಿಒ ಕಾರ್ಯ ಪ್ರಮುಖವಾಗಿದೆ. ಕೆಲಸದಲ್ಲಿ ಎಲ್ಲರನ್ನೂ ತೃಪ್ತಿಪಡಿಸಲು ಆಗುವುದಿಲ್ಲ. ತಮಗೆ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡುವ ಮೂಲಕ ಪಂಚಾಯಿತಿಗಳಲ್ಲಿ ಸಮಸ್ಯೆಗಳು ಬಾರದ ಹಾಗೆ ನೋಡಿಕೊಳ್ಳಬೇಕು. ಅಲ್ಲದೆ, ಕೆಲವು ಪಂಚಾಯಿತಿಗಳಲ್ಲಿ ನೀರು ಗಂಟಿಗಳು ಬೆಳಗ್ಗೆ ಕುಡಿಯುವ ನೀರಿನ ಸ್ವಿಚ್ ಆನ್ ಮಾಡಿ ತೆರಳಿ, ನಂತರ ಸಂಜೆ ಆಫ್ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ನೀರು ವ್ಯರ್ಥವಾಗಿ ಚರಂಡಿಗೆ ಹರಿಯುತ್ತಿದ್ದು, ಪಿಡಿಒಗಳು ಗಮನಿಸಬೇಕೆಂದರು.
ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಶ್ರೀನಿವಾಸ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಕೇಶ್ ಇದ್ದರು.