ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೋಟೆಲ್ ಉದ್ಯಮಿ ಹಾಗೂ ಸಮಾಜ ಸೇವಕ ಬೈಪಾಸ್ ಮಂಜುನಾಥ್, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಈ ದೇಶ ಕಂಡ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನ. ಅವರು ನಮ್ಮ ದೇಶಕ್ಕೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದು, ಅವರಿಗೆ ಮಕ್ಕಳೆಂದರೆ ಅತೀವ ಪ್ರೀತಿ, ಹಾಗಾಗಿ ಅವರ ಜನ್ಮದಿನವನ್ನೇ ಮಕ್ಕಳ ದಿನಾಚರಣೆಯನ್ನಾಗಿ ಮಾಡಬೇಕು ಎಂದು ಅಪೇಕ್ಷೆಪಟ್ಟಿದ್ದರು.
ಅದರಂತೆ ಇಂದು ದೇಶದ್ಯಾದಂತ ಮಕ್ಕಳ ದಿನಾಚರಣೆ ಆಯೋಜಿಸುತ್ತಿದ್ದು, ಮಕ್ಕಳಾದ ನೀವು ಇಂತಹ ಮಹನೀಯರ ಜೀವನ ಚರಿತ್ರೆಯನ್ನು ಓದಿ, ಅವರ ತತ್ತ್ವ, ಸಿದ್ಧಾಂತ, ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.ಎಂಜಿನಿಯರ್ ಅಭಿಷೇಕ್ ಮಾತನಾಡಿ, ಮಕ್ಕಳು ಓದುವ ವಯೋಮಾನದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್, ಟಿವಿ ವೀಕ್ಷಣೆಗಾಗಿ ಸಮಯವನ್ನು ವ್ಯರ್ಥಮಾಡದೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೆರೆಹೊರೆಯ ಶಾಲೆಯ ಮುಖ್ಯಶಿಕ್ಷಕರಾದ ಎಂ. ಮರಿಕಾಳಯ್ಯ, ಪ್ರೇಮಕುಮಾರ್, ಪೃಥ್ವಿ ಬಿ.ಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ವಿಜಯಕುಮಾರಿ, ಸದಸ್ಯರಾದ ಸ್ವಾಮಿಶೆಟ್ಟಿ, ಮಹಾದೇವು, ನಿಂಗಶೆಟ್ಟಿ, ಮಂಜುನಾಥ್, ಶಿವರಾಜು, ಸುಕನ್ಯಾ ಮಂಜುನಾಥ್, ಪುಟ್ಟಸ್ವಾಮಿ, ವಕೀಲ ಮನು ಇದ್ದರು. ಸಹ ಶಿಕ್ಷಕ ಡಿ. ನಾಗರಾಜು ಕಾರ್ಯಕ್ರಮ ನಿರ್ವಹಿಸಿದರು.