ನಾಳೆ ಆಲೂರಿನಲ್ಲಿಯೂ ಟ್ರ್ಯಾಕ್ಟರ್‌ ರ್‍ಯಾಲಿ: ರೈತರ ವಿವಿಧ ಬೇಡಿಕೆಗಳನ್ನ ಈಡೇರಿಕೆಗೆ ಒತ್ತಾಯ

KannadaprabhaNewsNetwork |  
Published : Jan 25, 2025, 01:02 AM IST
24ಎಚ್ಎಸ್ಎನ್9 : ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡರು. | Kannada Prabha

ಸಾರಾಂಶ

ರೈತರ ಸಮಸ್ಯೆಗಳಾದ ಸಾಲ ಮನ್ನಾ,ಎಂ.ಎಸ್.ಪಿ ಜಾರಿ,ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ, 60 ವರ್ಷ ದಾಟಿದ ರೈತರಿಗೆ ಪಿಂಚಣಿ, ರಸಗೊಬ್ಬರ, ಕೀಟನಾಶಕ, ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಉಪಕರಣಗಳ ಮೇಲಿನ ಜಿ.ಎಸ್.ಟಿ ರದ್ದು ಮಾಡಬೇಕು.

ಕನ್ನಡಪ್ರಭ ವಾರ್ತೆ ಆಲೂರು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬಗ್ಗೆ ಹೊಂದಿರುವ ಮಲತಾಯಿ ಧೋರಣೆ ಖಂಡಿಸಿ ಹಾಗೂ ರಾಷ್ಟ್ರೀಯ ಕಿಸಾನ್ ಮೋರ್ಚಾ ಸಂಚಾಲಕರಾದ ಜಗಜಿತ್ ಸಿಂಗ್ ದಲೈವಾಲಾ ಅವರ 55ನೇ ದಿನದ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ದೇಶಾದ್ಯಂತ ರೈತರ ಟ್ರ್ಯಾಕ್ಟರ್ ರ್ಯಾಲಿಯನ್ನು ಆಯೋಜಿಸಿದೆ.

ರೈತರ ವಿವಿಧ ಬೇಡಿಕೆಗಳನ್ನ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ಭಾರತ ದೇಶವು ಗಣರಾಜ್ಯವಾದ ದಿನದಂದು ಆಲೂರು ಪಟ್ಟಣದ ಕೆಇಬಿ ವೃತ್ತದಿಂದ ಕೊನೆಪೇಟೆಯವರೆಗೆ ಟ್ರ್ಯಾಕ್ಟರ್ ರ್ಯಾಲಿಯನ್ನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಬಿ ಧರ್ಮರಾಜು ಕರೆ ನೀಡಿದರು.

ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಚ್.ಬಿ ಧರ್ಮರಾಜು ಮಾತನಾಡಿ, ರೈತರ ಸಮಸ್ಯೆಗಳಾದ ಸಾಲ ಮನ್ನಾ,ಎಂ.ಎಸ್.ಪಿ ಜಾರಿ,ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ, 60 ವರ್ಷ ದಾಟಿದ ರೈತರಿಗೆ ಪಿಂಚಣಿ, ರಸಗೊಬ್ಬರ, ಕೀಟನಾಶಕ, ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಉಪಕರಣಗಳ ಮೇಲಿನ ಜಿ.ಎಸ್.ಟಿ ರದ್ದು ಮಾಡಬೇಕು, ಎನ್.ಡಿ.ಆರ್.ಎಫ್ ನಿಯಮಗಳನ್ನು ಪರಿಸ್ಕರಿಸಬೇಕು,ಎಲ್ಲಾ ಕೃಷಿ ಕಾರ್ಮಿಕರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಜಾರಿ ಮಾಡಬೇಕು, ರಾಜ್ಯ ಸರ್ಕಾರವು ಕೃಷಿ ಸಮ್ಮಾನ್ ಯೋಜನೆಯನ್ನು ಮರು ಜಾರಿ ಗೊಳಿಸಬೇಕು, ಫಸಲ್ ಭಿಮಾ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ರೈತರು ತಾಲೂಕು ಕಚೇರಿಯಲ್ಲಿ ಬಗರ್‌ಹುಕುಂ ಅಡಿ ಫಾರಂ 50,53,57 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಸರ್ಕಾರದ ಗೋಮಾಳಗಳ ಜಮೀನಿನಲ್ಲಿ 50-60 ವರ್ಷಗಳಿಂದ 2-3 ಎಕರೆ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಯಾವುದೇ ಷರತ್ತುಗಳು ಇಲ್ಲದೆ ಹಕ್ಕುಪತ್ರ ನೀಡಬೇಕು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು ಎಂಬುದು ಬೇಡಿಕೆಯಾಗಿದೆ.

ಉಳಿದಂತೆ ನೂರಾರು ವರ್ಷಗಳಿಂದ ಸರ್ಕಾರಿ ಗೋಮಾಳಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರಿಗೆ ಮತ್ತು ಕುಟುಂಬಗಳಿಗೆ ಮನೆಗಳ ಇ ಸ್ವತ್ತುಗಳನ್ನು ಕೊಡದೆ ಸತಾಯಿಸುತ್ತಿರುವುದು ಹಾಗೂ ಹಕ್ಕುಪತ್ರವನ್ನು ಕೊಡದೇ ಇರುವುದು ಹೀಗೆ ಹತ್ತು ಹಲವು ರೈತರ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಕೂಡಲೇ 2 ಸರ್ಕಾರಗಳು ಮೇಲ್ಕಂಡ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿ ಗಣರಾಜ್ಯೋತ್ಸವದ ದಿನದಂದು ಈ ರ್ಯಾಲಿಯನ್ನು ಹಮ್ಮಿಕೊಂಡಿದ್ದು ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ