ಕನ್ನಡ ಪ್ರಭ ವಾರ್ತೆ ಶನಿವಾರಸಂತೆ
ಸಿ ಅಂಡ್ ಡಿ ಲ್ಯಾಂಡ್ ಮತ್ತು ಸೆಕ್ಷನ್ 4 ಮತ್ತು 5 ರ ದುರಸ್ತಿ ವಿಳಂಬದ ಬಗ್ಗೆ ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿ ಮತ್ತು ರೈತರು ಆ. 12ರಂದು ಹಮ್ಮಿಕೊಂಡಿರುವ ತಾಲೂಕು ಬಂದ್ಗೆ ಶನಿವಾರಸಂತೆ ವರ್ತಕರ ಸಂಘ ಮತ್ತು ರೈತ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ದುಂಡಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮತ್ತು ವರ್ತಕರ ಸಂಘದ ನಿರ್ದೇಶಕ ಸಿ.ಜೆ.ಗಿರೀಶ್ ರೈತರ ಪರವಾಗಿ ಬೆಂಬಲ ವ್ಯಕ್ತ ಪಡಿಸಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿ ಅಂಡ್ ಡಿ ಲ್ಯಾಂಡ್ ವಿಚಾರ ಹಾಗೂ ಸೆಕ್ಷನ್ 4 ಮತ್ತು 5 ರ ಮತ್ತು ಇದರ ದುರಸ್ತಿ ವಿಳಂಬದಿಂದ ರೈತಾಪಿ ಜನರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಹಲವು ಬಾರಿ ರೈತ ಹೋರಾಟ ಸಮಿತಿ ಮತ್ತು ರೈತರು ಹೋರಾಟ ಮಾಡುತ್ತಿದ್ದರೂ ಅರಣ್ಯ ಇಲಾಖೆ, ಕಂದಾಯ ಇಲಾಖೆಯಿಂದ ನ್ಯಾಯ ಸಿಗುತ್ತಿಲ್ಲ ಮತ್ತು ಅಧಿಕಾರಿಗಳು ರೈತ ವಿರೋಧಿ ನಿಲುವು ತೋರುತ್ತಿದ್ದಾರೆ ಎಂದು ಆರೋಪಿಸಿದ ಗಿರೀಶ್ ಈ ವಿಚಾರದಲ್ಲಿ ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಸೋಮವಾರಪೇಟೆ ತಾಲೂಕು ರೈತ ಹೋರಾಟ ಸಮಿತಿ ಮತ್ತು ರೈತರು ಇಂದು ಕರೆದಿರುವ ತಾಲೂಕು ಬಂದ್‍ಗೆ ತಾಲೂಕಿನ ರೈತರು, ವಿವಿಧ ಸಂಘಟನೆಗಳು ಸಂಘ ಸಂಸ್ಥೆಯವರು ವ್ಯಾಪಕ ಬೆಂಬಲ ವ್ಯಕ್ತ ಪಡಿಸಿರುವ ನಿಟ್ಟಿನಲ್ಲಿ ಶನಿವಾರಸಂತೆ ವರ್ತಕರ ಸಂಘ, ರೈತ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತದೆ. ಇಂದು ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ಪಟ್ಟಣದಲ್ಲಿ ಯಾವುದೆ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಬಂದ್‍ಗೆ ಬೆಂಬಲ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಬಂದ್ ಯಶಸ್ವಿಗೆ ರೈತರು ಸಾರ್ವಜನಿಕರು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ವರ್ತಕರ ಸಂಘದ ನಿರ್ದೇಶಕ ಹೆಚ್.ಎನ್.ಕಿರಣ್, ರೈತ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ವಿನೋದ್, ಸದಸ್ಯರಾದ ಭರತ್‍ಕುಮಾರ್, ಎಂ.ಆರ್.ದಿಲೀಪ್, ಪುನಿತ್ ತಾಳೂರು ಹಾಜರಿದ್ದರು.