- ವರ್ತಕರ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವರ್ತಕರ ಸಂಘದಿಂದ ಕಾಯಂ ನಿವೇಶಕ್ಕಾಗಿ ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದ್ದು ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್ ಹೇಳಿದರು.ಭಾನುವಾರ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ನಡೆದ ವರ್ತಕರ ಸಂಘದ 2024–25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘಕ್ಕೆ ಕಾಯಂ ನಿವೇಶನ ನೀಡುವವರೆಗೆ ತಾತ್ಕಾಲಿಕವಾಗಿ ಖಾಲಿ ಇರುವ ಸರ್ಕಾರಿ ಕಟ್ಟಡ ಒಂದು ಕೊಠಡಿ ನೀಡುವ ಭರವಸೆಯನ್ನು ಶಾಸಕ ರಾಜೇಗೌಡ ನೀಡಿದ್ದಾರೆ.
ಹಲವಾರು ವರ್ಷಗಳಿಂದ ವರ್ತಕರ ಸಂಘದಿಂದ ರಸ್ತೆ ವಿಸ್ತರಣೆಗೆ ಶಾಸಕ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿ ಎಂ.ಶ್ರೀನಿವಾಸ್ ₹60 ಕೋಟಿ ರು. ಅನುದಾನ ಬಿಡುಗಡೆ ಮಾಡಿಸಿದ್ದು ಅವರನ್ನು ಅಭಿನಂದಿಸಲಾಗುವುದು ಎಂದರು.ಕಾರ್ಮಿಕ ಇಲಾಖೆ ನಿರೀಕ್ಷಣಾಧಿಕಾರಿ ಜೀವನಕುಮಾರ್ ಕಾರ್ಮಿಕ ಕಾಯ್ದೆ ಬಗ್ಗೆ ಮಾಹಿತಿ ನೀಡಿ, ಯಾವುದೇ ಕಾರಣಕ್ಕೂ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು. 10 ಅಥವಾ 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿ ಕೊಂಡರೆ ಇಎಸ್ ಐ ಕಡ್ಡಾಯವಾಗಿದೆ. ಆದರೆ, ಪಿಎಫ್ ಕಡ್ಡಾಯವಲ್ಲ. 20 ಕ್ಕಿಂತ ಹೆಚ್ಚು ಕಾರ್ಮಿಕರಿದ್ದರೆ ಇಎಸ್ ಐ ಮತ್ತು ಪಿಎಫ್ ಕಡ್ಡಾಯ. ಕನಿಷ್ಠ ಕೂಲಿ ಕಾಯ್ದೆ ಹೊಸ ನಿಯಮದ ಪ್ರಕಾರ ₹19,319 ರು. ಸಂಬಳ ನೀಡಬೇಕು. ಸಂಬಳವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕೆಂಬ ನಿಯಮವಿದೆ ಎಂದರು.
ವರ್ತಕರ ಸಂಘದ ಗೌರವಾಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ಮಾತನಾಡಿ, ಪಟ್ಟಣದಲ್ಲಿ ರಸ್ತೆ ವಿಸ್ತರಣೆಗೆ ವಿರೋಧವಿಲ್ಲ. ಸೂಕ್ತ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಬೇಕು. ಮಿನಿವಿಧಾನ ಸೌಧವನ್ನು ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಿಸಲು ಸಂಘ ದಿಂದ ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.ಸಂಘದ ಸಲಹೆಗಾರ ಬಿ.ಎಸ್.ಆಶೀಶ್ ಕುಮಾರ್ ಮಾತನಾಡಿ, ಆನ್ ಲೈನ್ ವ್ಯಾಪಾರ, ಪರ ಊರಿನಿಂದ ಬಂದು ತಾತ್ಕಾಲಿಕ ವ್ಯಾಪಾರ ಮಾಡುವವರಿಂದ ವರ್ತಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದರು.
ಜಿಎಸ್ ಟಿ ಬಗ್ಗೆ ಸಾಕಷ್ಟು ಗೊಂದಲವಿದ್ದು ಇದಕ್ಕೆ ಸಂಬಂಧಪಟ್ಟ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗೊಂದಲ ಬಗೆಹರಿಸಿಕೊಳ್ಳಬೇಕು. ವರ್ತಕ ಸಂಘದವರು ಒಗ್ಗಟಿನಿಂದ ಕಾರ್ಯ ನಿರ್ವಹಿಸಬೇಕೆಂದರು. ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ.ಮಥಾಯಿ, ಖಜಾಂಚಿ ಕಮ್ತಿವಾಸಪ್ಪಗೌಡ, ಸಹಕಾರ್ಯದರ್ಶಿ ನವೀದ್ ಹುಸೇನ್ ಇದ್ದರು.ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ಸಂಘದ ನಿರ್ದೇಶಕ ಚಂದ್ರಯ್ಯಶಾಸ್ತ್ರಿ ಅವರ ಪುತ್ರಿ ಪಾವನಿ ಸಿ.ಜೈನ್, ಸಂಘದ ಹಿರಿಯರಾದ ಟಿ.ಕೃಷ್ಣ, ಎಚ್.ಬಿ.ರಘುವೀರ್, ಮಹಮ್ಮದ್ ಗೌಸ್, ಜಿ.ಕೆ.ವೆಂಕಟೇಶ್ ಮೂರ್ತಿ, ಆನಂದ ಟೈಲರ್, ರವಿಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.