ಕನ್ನಡಪ್ರಭ ವಾರ್ತೆ ಚಾಮರಾಜನಗರ
ವರ್ತಕರ ಸೌಹಾರ್ದ ಸಹಕಾರಿ ಸಂಘವು ಕಳೆದ ೧೦ ವರ್ಷಗಳಲ್ಲಿ ಉತ್ತಮ ವಹಿವಾಟು ನಡೆಸಿದೆ. ಸ್ವಂತ ಕಟ್ಟಡ ಹೊಂದುವ ಜೊತೆಗೆ ವರ್ತಕರ ಆರ್ಥಿಕ ಪ್ರಗತಿಯಲ್ಲಿ ಹೆಚ್ಚಿನ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.ನಗರದ ರೈಲು ನಿಲ್ದಾಣದ ರಸ್ತೆಯಲ್ಲಿರುವ ಸಿಂಹ ಎನ್ ಕ್ಲೇವ್‌ನಲ್ಲಿ ನೂತನವಾಗಿ ನಿರ್ಮಿಸಿರುವ ವರ್ತಕರ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಹಾಗೂ ದಶಮಾನೊತ್ಸವ ಮತ್ತು ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರ್ತಕರು ಶ್ರಯೋಭಿವೃದ್ದಿಗಾಗಿ ಸ್ಥಾಪನೆಯಾದ ಸೌಹಾರ್ಧ ಸಹಕಾರ ಸಂಘವು ಆಡಳಿತ ಮಂಡಲಿಯ ನಿಸ್ವಾರ್ಥ ಸೇವೆಯಿಂದ ಕಳೆದ ಹತ್ತು ವರ್ಷಗಳಿಂದ ಲಾಭವನ್ನು ಗಳಿಸುವ ಜೊತೆಗೆ ಸುಮಾರು ೮೦ ಲಕ್ಷ ರು. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಿ, ಷೇರುದಾರರಿಗೆ ಪ್ರತಿ ವರ್ಷವು ಡಿವಿಡೆಂಟು ನೀಡುವ ಮಾಡುವ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಜಿಲ್ಲೆಯಲ್ಲಿಯೇ ಮಾದರಿಯಾದ ಸಂಘವಾಗಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು. ₹೨೧ ಲಕ್ಷ ನಿವ್ವಳ ಲಾಭ:ಸಂಘದ ಅಧ್ಯಕ್ಷ ಸಿ.ಪಿ. ಪದ್ಮಪ್ರಸಾದ್ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ನಮ್ಮ ಸಂಘವು ಉತ್ತಮ ವಹಿವಾಡು ನಡೆಸಿ ೨೧ ಲಕ್ಷ ರು.ಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೬.೭೫ ರಷ್ಟು ಡಿವಿಡೆಂಟು ನೀಡಲಾಗುವುದು ಎಂದು ತಿಳಿಸಿದರು. ನೂತನ ಕಟ್ಟಡದ ಉದ್ಗಾಟನೆ ಬಳಿಕ ನಡೆದ ಸರ್ವ ಸದಸ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ತಕರು ಹೆಚ್ಚು ಬಡ್ಡಿಯನ್ನು ಕೊಟ್ಟು ಖಾಸಗಿ ಲೇವಾದೇವಿದಾರರ ಸುಲಿಗೆ ಸಿಲುಕುವುದನ್ನು ತಪ್ಪಿಸಲು ಕಳೆದ ಹತ್ತು ವರ್ಷಗಳ ಹಿಂದೆ ಸೌಹಾರ್ದ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ, ವರ್ತಕರ ವ್ಯಾಪಾರಾಭಿವೃದ್ದಿಗೆ ಸಾಲ ಸೌಲಬ್ಯವನ್ನು ಕಲ್ಪಿಸಿ, ಅವರಿಗೆ ಮರು ಪಾವತಿಗೆ ಅವಕಾಶ ಮಾಡುವ ನಿಟ್ಟಿನಲ್ಲಿ ಪಿಗ್ನಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಸಲಾಗಿದೆ. ಇದರ ಪರಿಣಾಮ ೧೦ ವರ್ಷಗಳಲ್ಲಿ ಸಂಘವು ಲಾಭವನ್ನು ಗಳಿಸಿ, ಸ್ವಂತ ಕಟ್ಟಡವನ್ನು ನಿಮ್ಮೆಲ್ಲರ ಆಶಯದಂತೆ ಹೊಂದಲಾಗಿದೆ ಎಂದರು.ಸಂಘದ ಸದಸ್ಯರ ಉಳಿತಾಯ ಖಾತೆಗಳಿಗೆ ಇನ್ನು ಹತ್ತು ದಿನಗಳಲ್ಲಿ ಡಿವಿಡೆಂಟ್ ಹಣವನ್ನು ನೀಡಲಾಗುತ್ತದೆ. ಸದಸ್ಯರು ಸಕಾಲದಲ್ಲಿ ಸಾಲವನ್ನು ಪಡೆಯುವುದರ ಜೊತೆಗೆ ಮರು ಪಾವತಿಯನ್ನು ಸಕಾಲದಲ್ಲಿ ಪಾವತಿಸಬೇಕು. ಸಹಕಾರಿ ಬೆಳವಣಿಗೆ ಆರ್ಥಿಕ ಭದ್ರತೆ ಹಿತ ದೃಷ್ಟಿಯಿಂದ ಭದ್ರತಾ ಸಾಲಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಸಂಘದ ಉಪಾಧ್ಯಕ್ಷ ಬಿ.ವಿ.ವೆಂಕಟನಾಗಪ್ಪಶೆಟ್ಟಿ ಮಾತನಾಡಿ, ವರ್ತಕರ ಸೌಹಾರ್ದ ಸಹಕಾರ ಸಂಘ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ. ಸ್ವಂತ ಕಟ್ಟಡವನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಪ್ರತಿಭಾ ಪುರಸ್ಕಾರ, ಹಾಗೂ ಉತ್ತಮವಾಗಿ ವಹಿವಾಟು ಮಾಡಿದ ಸದಸ್ಯರನ್ನು ಸನ್ಮಾನಿಸಲಾಗುತ್ತಿದೆ ಎಂದರು.ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ ಮಾತನಾಡಿ, ವರ್ತಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಬಡ್ಡಿ ದರದಲ್ಲಿ ಅವರ ಸಾಲ ನೀಡಿ, ವ್ಯಾಪಾರವನ್ನು ವೃದ್ದಿಸುವ ಉದ್ದೇಶದೊಂದಿಗೆ ಸಹಕಾರಿ ತತ್ವದಡಿಯಲ್ಲಿ ಸಂಸ್ಥೆ ಸ್ಥಾಪನೆಗೊಂಡು ೧೦ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಇಂಥ ಸಂಘದಲ್ಲಿ ನಾವೆಲ್ಲರು ಇದ್ದೇವೆ ಎನ್ನುವುದೇ ಹೆಮ್ಮೆ. ಇನ್ನು ಎತ್ತರಕ್ಕೆ ಸಂಘ ಬೆಳೆಯಲಿ ಎಂದು ಆಶಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಜಿ. ಸಂಕೀರ್ತನ್ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಎಸ್.ಕೆ. ಮಂಜುನಾಥ್, ಭಾರತಿ ಜಿ. ಭಟ್, ಸಂಘದ ನಿರ್ದೇಶಕರಾದ ಸಿ.ಎಸ್. ಮಹೇಶ್‌ಕುಮಾರ್, ಎಸ್. ಬಾಲಸುಬ್ರಮಣ್ಯ, ಕೆ.ಎಸ್. ಚಿದನಂದಗಣೇಶ್, ಸಿ.ಎ. ನಾರಾಯಣ್, ಸಿ.ವಿ. ಶ್ರೀನಿವಾಸ್, ಎಚ್.ಬಿ. ರಾಜಶೇಖರ್, ಶ್ರೀಕಂಠಮೂರ್ತಿ, ಎಂ. ಕಮಲರಾಜ್, ಎಂ. ರಾಜಣ್ಣ, ಮಹೇಶ್‌ಕುಮಾರ್, ರಾಘವೇಂದ್ರ, ರಾಮಚಂದ್ರ, ರೇಖಾ ಶ್ರೀಧರ್, ಪುಷ್ಪ ಶ್ರೀನಿವಾಸ್, ಎಸ್.ವಿ. ಗಣೇಶ್, ಸಿ.ಇ. ಮಧುಸೂಧನ್ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.