ಕನ್ನಡಪ್ರಭ ವಾರ್ತೆ ಹುಳಿಯಾರು
ನಾವು ಸಂತೆ ವ್ಯಾಪಾರದಿಂದಲೇ ಜೀವನ ಸಾಗಿಸುತ್ತಿದ್ದು ಸಂತೆ ಸ್ಥಳಾಂತರದಿಂದ ವ್ಯಾಪಾರ ಇಲ್ಲದಾಗಿ ನಮ್ಮ ಹೊಟ್ಟೆ ಬಟ್ಟೆಗೆ ಕುತ್ತು ಬರುತ್ತದೆ ಹಾಗಾಗಿ ಸಂತೆ ಸ್ಥಳಾಂತರಿಸಬೇಡಿ ಎಂದು ಸಂತೆ ವ್ಯಾಪಾರಸ್ಥರು ಅಧಿಕಾರಿಗಳಿಗೆ ಮನವಿ ಮಾಡುವ ಮೂಲಕ ಕಳೆದ 30 ದಿನಗಳಿಂದ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವ್ಯಾಪಾರಸ್ಥರು ತಣ್ಣಿರೇರಿಚಿದ್ದಾರೆ.ಬಡವರ ಹೊಟ್ಟೆಯ ಮೇಲೆ ಹೊಡೆಯಬೇಡಿ ನಾವು ಜೀವನ ನಿರ್ವಹಣೆಗೆ ಸಾಲ ಸೂಲ ಮಾಡಿದ್ದೇವೆ ಆ ಸಾಲ ತೀರಿಸಲು ಸಂತೆ ವ್ಯಾಪಾರ ಒಂದೇ ಆಧಾರವಾಗಿದೆ ಹಾಗಾಗಿ ಸಂತೆ ಸ್ಥಳಾಂತರಿಸದೆ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ ಎಂದು ಅಂಗಲಾಚಿದರು.ಪಟ್ಟಣದ ಪಟ್ಟಣ ಪಂಚಾಯತಿ ಮುಂದೆ ಸಂತೆ ವ್ಯಾಪಾರಸ್ಥರು ಸೇರಿ ಮಾಧ್ಯಮದವರೊಂದಿಗೆ ಮಾತನಾಡಿ ಗಾಂಧಿ ಪೇಟೆಯಲ್ಲಿ ತಾತ ಮುತ್ತಾತರ ಕಾಲದಿಂದಲೂ ಸಂತೆ ನಡೆಸುತ್ತಿದ್ದು ನಾವು ಈ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದೇವೆ. ಇದರಿಂದ ಸುಮಾರು 500 600 ಜನರ ಜೀವನ ಸಾಗುತ್ತಿದೆ. ಈ ಜಾಗವು ನಮಗೆ ಸೂಕ್ತವಾಗಿದ್ದು, ಪಟ್ಟಣ ಪಂಚಾಯಿತಿಯವರು ಗುರುತಿಸಿರುವ ಎ ಪಿ ಎಂ ಸಿ ಜಾಗವು ಗೊಂದಲದ ಗೂಡಾಗಿದೆ ಮತ್ತು ಬಹಳ ದೂರವಾಗಿದೆ. ವ್ಯಾಪಾರಸ್ಥರು ಹಾಗೂ ಸಂತೆಗೆ ಬರುವವರಿಗೆ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲವಾಗಿದೆ. ನಮಗೆ ವ್ಯಾಪಾರ ನಡೆಯುವುದು ಕಷ್ಟವಾಗಿದೆ. ವ್ಯಾಪಾರ ನಡೆಯದಿದ್ದರೆ ನಮ್ಮ ಹೊಟ್ಟೆಯ ಪಾಡೇನು? ಹಾಗಾಗಿ ಈಗ ನಡೆಸುತ್ತಿರುವುದು ಗೋದಿ ಪೇಟೆ ಜಾಗದಲ್ಲಿಯೇ ಸಂತೆ ನಡೆಸಿಕೊಂಡು ಯಾರಿಗೂ ತೊಂದರೆ ನೀಡದಂತೆ ಎಚ್ಚರಿಕೆ ವಹಿಸಿಕೊಂಡು ಹೋಗುತ್ತೇವೆ ಎಂದು ಸಂತೆ ವ್ಯಾಪಾರಸ್ಥರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಹಾಗೂ ಆರಕ್ಷಕ ಠಾಣೆಗೆ ಮನವಿ ಪತ್ರ ನೀಡಿದರು.