ಮಕ್ಕಳಿಗೆ ಸಂಪ್ರದಾಯ, ಸಂಸ್ಕಾರ ಕಲಿಸಬೇಕು

KannadaprabhaNewsNetwork | Published : Jan 24, 2024 2:00 AM

ಸಾರಾಂಶ

ನಾವು ನಮ್ಮ ಬದುಕಿನ ದಿನ ನಿತ್ಯದ ಕೆಲಸ ಕಾರ್ಯಗಳ ಒತ್ತಡ, ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ನಮ್ಮ ಪದ್ದತಿಗಳನ್ನು ನಾವೇ ಮರೆಯುತ್ತಿದ್ದೇವೆ, ಇದು ಕೇವಲ ಆಚರಣೆ ಪದ್ದತಿಗಳಲ್ಲ, ಅದು ನಮ್ಮ ಬದುಕು ಮುಂದಿನ ಪೀಳಿಗೆಯ ಭವಿಷ್ಯವೂ ಕೂಡ ಆಗಿದೆ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ನಾವು ನಮ್ಮ ಮಕ್ಕಳಿಗೆ ನಮ್ಮ ಹಬ್ಬ, ಹರಿದಿನಗಳು, ಆಚಾರ , ವಿಚಾರ, ಸಂಪ್ರದಾಯಗಳ ಬಗ್ಗೆ ತಿಳಿಸಿಕೊಟ್ಟು ಅವುಗಳ ಮಹತ್ವವನ್ನು ತಿಳಿಯಪಡಿಸಬೇಕು. ಹೆತ್ತವರು, ಹಿರಿಯರು, ಗುರುಗಳನ್ನು ಗೌರವಿಸುವಂತಹ ಸಂಸ್ಕಾರವನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅಭಿಪ್ರಾಯಪಟ್ಟರು.

ಅಯೋಧ್ಯೆಯಲ್ಲಿ ನಡೆದ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶಿಡ್ಲಘಟ್ಟ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯಸ್ವಾಮಿಯ ವೇಷಭೂಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ

ನಾವು ನಮ್ಮ ಬದುಕಿನ ದಿನ ನಿತ್ಯದ ಕೆಲಸ ಕಾರ್ಯಗಳ ಒತ್ತಡ, ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ನಮ್ಮ ಪದ್ದತಿಗಳನ್ನು ನಾವೇ ಮರೆಯುತ್ತಿದ್ದೇವೆ, ಇದು ಕೇವಲ ಆಚರಣೆ ಪದ್ದತಿಗಳಲ್ಲ, ಅದು ನಮ್ಮ ಬದುಕು ಮುಂದಿನ ಪೀಳಿಗೆಯ ಭವಿಷ್ಯವೂ ಕೂಡ ಆಗಿದೆ. ಆಗಾಗೀಯೆ ನಾವಿಂದು ಹತ್ತು ಹಲವು ರೋಗಗಳಿಂದ ಬಳಲುತ್ತಿದ್ದೇವೆ. ನೆಮ್ಮದಿ ಇಲ್ಲದ ಕಾಲ ಚಕ್ರಕ್ಕೆ ಸಿಲುಕಿ ಓಡುವ ಬದುಕು ನಮ್ಮದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮಗೆ ಶ್ರೀರಾಮನೇ ಆದರ್ಶ ಪುರುಷ, ಶ್ರೀರಾಮನಲ್ಲಿ ನಾವು ಎಲ್ಲ ರೀತಿಯ ಗುಣಗಳನ್ನು ಕಾಣಬಹುದು, ಶ್ರೀರಾಮನನ್ನು ಆದರ್ಶಪುರುಷನಾಗಿ, ಏಕ ಪತ್ನೀವ್ರತಸ್ತನಾಗಿ, ಉತ್ತಮ ಪರಿಪಾಲಕನಾಗಿ, ಪಿತೃವಾಕ್ಯ ಪರಿಪಾಲಕನನ್ನಾಗಿ ನಾವು ಕಾಣಬಹುದು.

ಮಕ್ಕಳಿಗೆ ರಾಮನ ನೀತಿ ಕಲಿಸಿ

ನಾವಿಂದು ನಮ್ಮ ಮಕ್ಕಳಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆಡಳಿತದ ರಾಜಧರ್ಮದ ಪರಿಪಾಲನೆಯಲ್ಲಿನ ಆದರ್ಶಗಳು , ಸಮಾನತೆ , ನ್ಯಾಯ ಪರಿ ಪಾಲನೆಯನ್ನು ಇಂದಿನ ಯುವ ಪೀಳಿಗೆಯ ಜನರಿಗೆ ತಿಳಿಸಲು ರಾಮಾಯಣ ಪರಿಚಯ ಮಾಡಿಕೊಡುವ ಮಹತ್ತರವಾದ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ. ಆಗಾಗೀಯೆ ಈ ಶಾಲೆಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಉತ್ತಮ ವೇಷಭೂಷಣ ಪ್ರದರ್ಶಕರಿಗೆ ಬಹುಮಾನ ಹಾಗೂ ಎಲ್ಲರಿಗೂ ಸಮಾಧಾನಕರ ಬಹುಮಾನವನ್ನು ನೀಡುವುದಾಗಿ ಘೋಷಿಸಿದರು.

ವೇದ ಪಂಡಿತ ವೈ.ಎನ್.ದಾಶರಥಿ ಅವರಿಂದ ರಾಮಾಯಣದ ಬಗ್ಗೆ ಪ್ರವಚನ ಏರ್ಪಡಿಸಲಾಗಿತ್ತು. ಅಯೋಧ್ಯೆಯ ಕರಸೇವೆಗೆ ಹೋಗಿದ್ದವರನ್ನ ಸನ್ಮಾನಿಸಲಾಯಿತು. ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯಸ್ವಾಮಿ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಗಮನ ಸೆಳೆದರು. ವಿಜೇತ ಮಕ್ಕಳಿಗೆ ಸೀಕಲ್ ರಾಮಚಂದ್ರಗೌಡ ಬಹುಮಾನ ವಿತರಿಸಿದರು.

ಇನ್ನೂ ಮಾತು ಬಾರದ, ತೊದಲು ತೊದಲು ಮಾತನಾಡುವ ಮಕ್ಕಳಿಂದ ಹಿಡಿದು ಕಾಲೇಜು ಓದುವ ವಿದ್ಯಾರ್ಥಿಗಳು ಶ್ರೀರಾಮ, ಸೀತೆ ,ಲಕ್ಷ್ಮಣ ,ಆಂಜನೇಯನ ಪಾತ್ರದ ವೇಷಗಳನ್ನು ತೊಟ್ಟಿದ್ದರು. ವೇಷ ಭೂಷಣದಲ್ಲಿ ಮಿಂಚಿದ ಮಕ್ಕಳು ಶ್ರೀರಾಮಾಯಣದಲ್ಲಿ ಮುಖ್ಯ ಘಟ್ಟದ ವಾಕ್ಯಗಳನ್ನು, ಡೈಲಾಗ್ಗಳನ್ನು ಹೇಳುವ ಮೂಲಕ ಸಭಿಕರನ್ನು ಕೂತಲ್ಲೇ ಕೂರುವಂತೆ ಮಾಡಿದರು. ಕೇವಲ ವೇಷಭೂಷಣಗಳ ಪ್ರದರ್ಶನ ಮಾತ್ರವೇ ಮಾಡದೆ ಸಂದೇಶವನ್ನು ಸಾರಿದ ವೇಷಭೂಷಣ ಸ್ಪರ್ಧೆ ಗಮನ ಸೆಳೆಯಿತು.

ಈ ಸಂರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ, ವಾಸವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಮೇಶ್, ಸೀಕಲ್ ಆನಂದ್ ಗೌಡ, ವೈ.ಎನ್.ದಾಶರಥಿ, ರಮೇಶ್ ಬಾಯರಿ , ಪ್ರಿನ್ಸಿಪಾಲ್ ಶಿವಕುಮಾರ್ ಇನ್ನಿತರರು ಹಾಜರಿದ್ದರು.

Share this article