ನಾಡಿನ ಉಡುಗೆ-ತೊಡುಗೆ, ಭಾಷೆ, ಸಂಪ್ರದಾಯಿಕ ನೃತ್ಯ, ಹಾಡುಗಳು ಉಳಸಬೇಕಾದರೆ ಅವುಗಳನ್ನು ನಾವು ಬಳಸಬೇಕು.
ಸಾಂಸ್ಕೃತಿಕ ಕಲಾ ಮೇಳ ಉದ್ಘಾಟಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ
ಕನ್ನಡಪ್ರಭ ವಾರ್ತೆ ಮುಂಡಗೋಡ
ನಾಡಿನ ಉಡುಗೆ-ತೊಡುಗೆ, ಭಾಷೆ, ಸಂಪ್ರದಾಯಿಕ ನೃತ್ಯ, ಹಾಡುಗಳು ಉಳಸಬೇಕಾದರೆ ಅವುಗಳನ್ನು ನಾವು ಬಳಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಹೇಳಿದರು.
ಪಟ್ಟಣದ ಲೊಯೋಲಾ ಸಭಾಂಗಣದಲ್ಲಿ ಬುಡಕಟ್ಟು ಮತ್ತು ತಳಸಮುದಾಯಗಳ ಒಕ್ಕೂಟ ಹಾಗೂ ಲೊಯೋಲಾ ವಿಕಾಸ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಲಾ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡೊಳ್ಳು ಕುಣಿತ, ಸುಗ್ಗಿ ಕುಣಿತ, ಲಂಬಾಣಿ ನೃತ್ಯ, ಗೌಳಿ ನೃತ್ಯ ಸೇರಿದಂತೆ ಹಲವಾರು ಸಂಪ್ರದಾಯಿಕ ಕಲೆಗಳು ಇಂದಿನ ಮೊಬೈಲ್, ಕಂಪ್ಯೂಟರ್, ಟಿವಿ ಯುಗದಲ್ಲಿ ನಶಿಸಿ ಹೋಗುತ್ತಿವೆ. ಈ ಸಂದರ್ಭದಲ್ಲಿ ಅಂತಹ ಕಲೆಗಳನ್ನು ಉಳಿಸಿ-ಬೆಳೆಸುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕಲೆಗಳನ್ನು ಬಳಸಿದಷ್ಟು ಬೆಳೆಯುತ್ತವೆ. ಶ್ರೀಮಂತ ಕಲೆಗಳನ್ನು ಉಳಿಸಬೇಕಿದೆ. ನಮ್ಮ ದೇಶ ಇವತ್ತು ಶ್ರೀಮಂತವಾಗಿರಲು ತಳಮಟ್ಟದ ಸಮುದಾಯ ಕಲೆ ಹಾಗೂ ಸಂಸ್ಕೃತಿ ಕಾರಣ. ತಳಮಟ್ಟ ಸಮುದಾಯಗಳ ಕುಂದು-ಕೊರತೆ, ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹರಿಸುವ ಕಾರ್ಯಕ್ರಮ ಕೂಡ ಇದಾಗಿದೆ. ಅವರ ಸಂಸ್ಕೃತಿ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಎಲ್ಲ ಸಮುದಾಯಗಳ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಹಬ್ಬ ಇದಾಗಿದೆ. ಸರ್ವ ಜನಾಂಗದ ಶಾಂತಿ ತೋಟ ಎಂಬುದಕ್ಕೆ ಮುಂಡಗೋಡ ತಾಲೂಕು ಉತ್ತಮ ನಿದರ್ಶನವಾಗಿದೆ. ಕುವೆಂಪು ಅವರು ಹೇಳಿದಂತೆ ಟಿಬೇಟಿಯನ್, ಸಿದ್ದಿ, ಲಂಬಾಣಿ ಗೌಳಿ ಸೇರಿದಂತೆ ವಿವಿಧ ಧರ್ಮ ಮತ್ತು ಭಾಷಿಕರು ಅತಿ ಪ್ರೀತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿರುವ ವೈವಿಧ್ಯಮಯ ತಾಲೂಕು ಇದಾಗಿದೆ ಎಂದು ಬಣ್ಣಿಸಿದರು.
ಟಿಬೇಟಿಯನ್ ಧರ್ಮಗುರು ಜಂಪಾ ಮಾತನಾಡಿ, ವಿವಿಧ ಕಲೆಯನ್ನು ಹೋದಿದವರು ಕೂಡ ವಿಜ್ಞಾನಿಗಳಿದ್ದಂತೆ. ಹಾಗಾಗಿ ತಳಮಟ್ಟ ಸಮುದಾಯ ಕಲೆಯಲ್ಲಿಯೇ ಉದ್ಯಮ ಮಾಡುತ್ತಾರೆ. ಹಾಗಾಗಿ ಅವರು ಕೂಡ ವಿಜ್ಞಾನಿಗಳೆ ಎಂದರು.
ಲೊಯೋಲಾ ವಿಕಾಸ ಕೇಂದ್ರ ನಿರ್ದೇಶಕ ಅನಿಲ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನವೇದಿಕೆ ನಾಯಕ ಬೀರು ಕಾತ್ರಟ್ ಅಧ್ಯಕ್ಷತೆ ವಹಿಸಿದ್ದರು. ಆನವೇದಿಕೆ ಅಧ್ಯಕ್ಷ ಬಸವಂತಪ್ಪ ಪೂಜಾರ, ನವೀನ ಸಿದ್ದಿ, ಅಲ್ವಿನ್ ಡಿಸೋಜ, ಡಾ. ಗ್ಲ್ಯಾಡಿಸ್ ಮೆನೆಜಸ್, ಶಿಸಿಲಿಯಾ ರೋಡಿಗ್ರಸ್, ಶ್ರೀನಿವಾಸ ಪಾಟೀಲ, ಮಂಜುನಾಥ ಶಾಸ್ತ್ರಿ, ಸುನೀಲ ಸಿದ್ದಿ, ಸುನಿಲ ಶಳಕೆ, ಮಂಜುನಾಥ ಲಮಾಣಿ, ಕ್ರಾಸ್ಟಾ, ಶರಲ್, ಫಾರೆಸ್ಟ್ ರಮೇಶ, ಸರೋಜಾ ಚವ್ಹಾಣ, ಸುರೇಶ ರಾಠೋಡ, ಅಶೋಕ ದೈವಜ್ಞ, ತನ್ವಿರ ಮಿರ್ಜಾನಕರ, ಜನ್ನುಬಾಯಿ ಕೋಕ್ರೆ, ಜೆಸಸ್ ಪೈಸ್, ವಿನ್ಸೆಂಟ್ ಜೇಸನ್ ಹಾಗೂ ಲೊಯೋಲಾ ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು. ಗುಲಜಾರ ಸಂಗೂರ ಕಾರ್ಯಕ್ರಮ ನಿರೂಪಿಸಿದರು. ಅಂಜನಾ ಪರಶುರಾಮ ತಹಸೀಲ್ದಾರ ಸ್ವಾಗತಿಸಿದರು. ಮಂಗಳಾ ಮೋರೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ನಾಗರಾಜ ಕಟ್ಟಿಮನಿ ಅರಣ್ಯ ಅತಿಕ್ರಮಣ ಸಂವಾದ ಕಾರ್ಯಕ್ರಮ ನೆರವೇರಿಸಿದರು. ಸ್ಮಿತಾ ಡಿಕೋಸ್ಟಾ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.