ಬಿ.ಲಕ್ಷ್ಮೀಕಾಂತಸಾ
ಸೀಮಿತ ಸ್ಥಳದಲ್ಲಿಯೇ ಸಾವಿರಕ್ಕೂ ಹೆಚ್ಚು ಕೃಷಿ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪಾರಂಪರಿಕ ಕೃಷಿ ಉಪಕರಣಗಳು ಮತ್ತು ಅಳತೆಯ ಮಾಪಕಗಳನ್ನು ಜನರು ನೋಡಿ ಖುಷಿಗೊಂಡರಲ್ಲದೆ, ಕಣ್ಮರೆಯಾಗುತ್ತಿರುವ ಪಾರಂಪರಿಕ ಕೃಷಿ ಪರಿಕರಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಘನ, ದ್ರವರೂಪದ ಅಳತೆಯ ಮಾಪಕಗಳನ್ನು ಹಾಗೂ ಗತಕಾಲದ ಕೃಷಿ ಉಪಕರಣಗಳು ಕುತೂಹಲದಿಂದ ಗಮನಿಸುವಂತೆ ಮಾಡಿದವು.ಇದೇ ವೇಳೆ ಕನ್ನಡಪ್ರಭ ಜೊತೆ ಮಾತನಾಡಿದ ಮಲ್ಲಯ್ಯ ಗುರುಬಸಪ್ಪನಮಠ, ಪಾರಂಪರಿಕ ಕೃಷಿ ಹಾಗೂ ಕೃಷಿ ಸಲಕರಣೆಗಳು ಕಾಣೆಯಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಪರಂಪರೆ ಉಳಿಯಬೇಕು ಎಂದರೆ ಹಳೆಯದನ್ನು ಉಳಿಸಿಕೊಳ್ಳಬೇಕು. ಹೊಸತನದ ಜೊತೆಗೆ ಹಳತನ್ನು ಜತನವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಡಿ.ಟಿ. ಮಂಜುನಾಥ್ ಮತ್ತು ಉಪ ಕೃಷಿ ನಿರ್ದೇಶಕರಾದ ಡಾ.ಕೆ.ನಯೀಮ್ ಪಾಷಾ ಮಾತನಾಡಿ, ಕಟಾವಿನ ನಂತರದ ಸುಗ್ಗಿಯ ಸಂಭ್ರಮ ಪ್ರಸ್ತುತಪಡಿಸಲಾಗಿದೆ. ಜೊತೆಗೆ ಸಣ್ಣ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಹಾಗೂ ಸಿರಿ ಧಾನ್ಯಗಳ ಬೀಜಗಳ ತಳಿ ಪ್ರದರ್ಶನ ಕೂಡ ಆಯೋಜಿಸಲಾಗಿದೆ. ರೈತರು ಪ್ರದರ್ಶನದಲ್ಲಿ ಪಾಲ್ಗೊಂಡು ಕೃಷಿ ಕುರಿತ ಮಾಹಿತಿ ಪಡೆದು ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ನಮ್ಮ ಇಲಾಖೆಯ ಶ್ರಮವನ್ನು ಸಾರ್ಥಕಗೊಳಿಸಬೇಕು ಎಂದು ಕೋರಿದರು.
ಕೃಷಿ ವಸ್ತು ಪ್ರದರ್ಶನದಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ಚಕ್ಕುಲಿ, ಕೋಡುಬಳೆ, ಬಿಸ್ಕತ್ ಹಾಗೂ ಚಿಪ್ಸ ಸೇರಿದಂತೆ ಅನೇಕ ಖಾದ್ಯಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಜಿಲ್ಲಾ ಕೃಷಿ ಇಲಾಖೆ ಸಿರಿಧಾನ್ಯಗಳಿಂದಲೇ ನಿರ್ಮಿಸಿದ್ದ ಸಾಸಿವೆ ಕಾಳುಗಣಪ ಬಹುತೇಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕೃಷಿ ಇಲಾಖೆಯಿಂದ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಬೆಳಿಗ್ಗೆ ಜನಸಂದಣಿ ಇರಲಿಲ್ಲ. ಸಂಜೆಯಾಗುತ್ತಿದ್ದಂತೆಯೇ ಹಂಪಿ ವೀಕ್ಷಕರ ಆಗಮನವಾಯಿತು. ಇದರಿಂದ ಸಂಜೆ ಬಳಿಕ ವಸ್ತುಪ್ರದರ್ಶನ ಮಳಿಗೆಯಲ್ಲಿ ಜನರ ಓಡಾಟ ಹೆಚ್ಚಳಗೊಂಡಿತು.