ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಗಾನಕಲಾ ಪರಿಷತ್ತು ಮತ್ತು ಗಾನಭಾರತಿ ವತಿಯಿಂದ ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ ಆಯೋಜಿಸಿರುವ 54ನೇ ಹಿರಿಯ ಸಂಗೀತ ವಿದ್ವಾಂಸರ ಹಾಗೂ 36ನೇ ಕಿರಿಯ ಯುವ ಸಂಗೀತ ವಿದ್ವಾಂಸರ ರಾಜ್ಯ ಸಂಗೀತ ಸಮ್ಮೇಳನದಲ್ಲಿ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಶಾಸ್ತ್ರೀಯ ಸಂಗೀತದ ಭವ್ಯ ಪರಂಪರೆಯ ಉಳಿವು, ಬೆಳವಣಿಗೆ ಆಗಲು ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ. ಧ್ವನಿ, ಶಾರೀರ ಸಂಸ್ಕರಣವನ್ನು ಯುವ ಸಂಗೀತಗಾರರು ಕಾಪಾಡಿಕೊಳ್ಳಬೇಕು. ಪ್ರಸಿದ್ಧಿಗೆ ಬಾರದ ರಾಗಗಳಲ್ಲಿ ಯುವ ಸಮುದಾಯವು ಪ್ರಯೋಗ ನಡೆಸಬೇಕು. ಪರಂಪರೆಯನ್ನು ಉಳಿಸಬೇಕು ಎಂದರು.ಉತ್ತರಾಧಿ ಸಂಗೀತವು ಕಸಿಕಟ್ಟಿದ್ದಾಗಿದ್ದು, ಪರ್ಶಿಯನ್ ಸಂಸ್ಕೃತಿಯೊಂದಿಗೆ ಮೇಳೈಸಿದೆ. ಕರ್ನಾಟಕ ಸಂಗೀತವು ಸಂಕರಗೊಳ್ಳದೇ ಮೂಲಶಾಸ್ತ್ರೀಯ ಚೌಕಟ್ಟನ್ನು ಉಳಿಸಿಕೊಂಡಿದ್ದು, ಕಲೆಯಲ್ಲದೇ ವಿಜ್ಞಾನವೂ ಆಗಿದೆ. ಸಂಗೀತ ಪ್ರಯೋಗಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ. ಕರ್ನಾಟಕ ಸಂಗೀತವು ಸಾಮವೇದದಿಂದಲೂ ಮೂಲದಾಟಿಯನ್ನು ಜತನದಿಂದ ಕಾಪಾಡಿಕೊಂಡಿದೆ. ಜಾನಪದ ಸಂಗೀತ, ವಾದ್ಯಗಳಿಂದ ಪ್ರಭಾವಿತಗೊಂಡಿದೆ. ಅಲ್ಲದೆ ಹಿಂದೂಸ್ಥಾನಿ ಸಂಗೀತದೊಂದಿಗೆ ಕೊಂಡುಕೊಳ್ವಿಕೆಯನ್ನು ಮಾಡಿದೆ ಎಂದು ಅವರು ತಿಳಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿದ್ವಾನ್ ಆರ್.ಕೆ. ಪದ್ಮನಾಭ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಒಬ್ಬರು ಕರ್ನಾಟಕ ಸಂಗೀತ ವಿದ್ವಾಂಸರ ಹೆಸರಿಲಿಲ್ಲದೆ ಇರುವುದು ಬೇಸರದ ಸಂಗತಿ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು. ಮೊದಲು ಕರ್ನಾಟಕ ಸಂಗೀತ ವಿದ್ವಾಂಸರಿಗೆ ಹೊರ ರಾಜ್ಯ, ದೇಶಗಳಲ್ಲಿ ಆದ್ಯತೆ ಕಡಿಮೆ ಇತ್ತು. ಆದರೆ ಇಂದು ಅದು ಬದಲಾಗಿ ನಮಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಅದರ ಹಿಂದೆ ಸಾಕಷ್ಟು ವಿದ್ವಾಂಸರ ಶ್ರಮ ಅಡಗಿದೆ ಎಂದರು.
ಯುವ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷ ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಹಾಗೂ ಲೇಖಕ ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿದರು. ಈ ವೇಳೆ ವಿದುಷಿ ಕಲಾವತಿ ಅವಧೂತ್, ಉದ್ಯಮಿ ಜಗನ್ನಾಥ ಶೆಣೈ, ಮೃದಂಗ ವಿದ್ವಾನ್ ಜಿ.ಎಸ್. ರಾಮಾನುಜನ್ ಮೊದಲಾದವರು ಇದ್ದರು.