ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ತಾಲೂಕಿನ ಮಾಜಾಳಿ ಗ್ರಾಮದ ಬ್ರಾಹ್ಮಣವಾಡಾದಲ್ಲಿ ಗುರುವಾರ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ತಾಲೂಕಿನ ಮಾಜಾಳಿ ಗ್ರಾಮದ ಬ್ರಾಹ್ಮಣವಾಡಾದಲ್ಲಿ ಗುರುವಾರ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದಿದೆ. ಈ ಅವಘಡದಿಂದಾಗಿ ಮಲ್ಪೆ-ಕಾರವಾರ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸಮುದ್ರದ ಕಡೆಯಿಂದ ಬಲವಾದ ಗಾಳಿ ಬೀಸುತ್ತಿದೆ. ಗಾಳಿಯ ವೇಗಕ್ಕೆ ರಸ್ತೆ ಬದಿಯಲ್ಲಿದ್ದ ದೊಡ್ಡ ಮರವು ಬೇರು ಸಮೇತ ಕಿತ್ತು ರಸ್ತೆಯ ಮಧ್ಯಭಾಗಕ್ಕೆ ಬಿದ್ದಿದೆ. ಮರ ಬಿದ್ದ ತಕ್ಷಣ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಕೆಲಸಕ್ಕೆ ತೆರಳುತ್ತಿದ್ದವರು ಗಂಟೆಗಟ್ಟಲೆ ಪರದಾಡುವಂತಾಯಿತು. ಅದೃಷ್ಟವಶಾತ್ ಮರ ಬೀಳುವ ಸಮಯದಲ್ಲಿ ಯಾವುದೇ ವಾಹನಗಳು ಅಡಿಯಲ್ಲಿಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ತಂಡ ಸ್ಥಳಕ್ಕೆ ಧಾವಿಸಿತು. ಕಟಾವು ಯಂತ್ರ ಬಳಸಿ ಮರವನ್ನು ತುಂಡು ಮಾಡುವ ಮೂಲಕ ಸಂಚಾರಕ್ಕೆ ರಸ್ತೆ ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಮರ ತೆರವುಗೊಂಡ ಬಳಿಕ ಸಂಚಾರವನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂ.29 ರ ತನಕ ಆರೆಂಜ್ ಅಲರ್ಟ್:
ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಂಭವವಿರುವುದರಿಂದ ಹವಾಮಾನ ಇಲಾಖೆಯು ಜೂ. 29ರವರೆಗೆ ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಭಾರಿ ಮಳೆ ಹಾಗೂ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಸಂಚರಿಸಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ. ಮುಖ್ಯವಾಗಿ ಹಳೆಯ ಕಟ್ಟಡಗಳು, ವಿದ್ಯುತ್ ಕಂಬಗಳು ಹಾಗೂ ಮರಗಳ ಸಮೀಪ ಆಶ್ರಯ ಪಡೆಯಬಾರದು ಮತ್ತು ಅಪಾಯದ ಪ್ರದೇಶಗಳಿಂದ ದೂರವಿರಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.