ಕ್ರಷರ್‌ಗಳಿಂದ ಬೃಹತ್ ಲಾರಿಗಳ ಸಂಚಾರ, ಹಳ್ಳ ಬಿದ್ದ ರಸ್ತೆಗಳು...!

KannadaprabhaNewsNetwork | Published : Mar 4, 2025 12:32 AM

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ, ಕಾಳೇನಹಳ್ಳಿ, ಚೆನ್ನನಕೆರೆ, ಮುಂಡಗದೊರೆ ಸೇರಿದಂತೆ ಅರಣ್ಯ ವ್ಯಾಪ್ತಿ ಹಾಗೂ ಸಿದ್ದಾಪುರ ಜಕ್ಕನಹಳ್ಳಿ ಗಣಂಗೂರು ಗೌಡಹಳ್ಳಿ ಗೋಮಾಳಗಳಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಜೊತೆಗೆ ಗ್ರಾಮಗಳ ಮೂಲಕ ಹಾದು ಹೋಗುವ ಅಧಿಕ ಲೋಡ್ ತುಂಬಿದ ಭಾರೀ ವಾಹನಗಳಿಂದ ರಸ್ತೆಗಳು ಹಾಳಾಗುತ್ತಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕ್ರಷರ್‌ಗಳಿಂದ ಅಧಿಕ ಭಾರ ತುಂಬಿದ ಬೃಹತ್ ಲಾರಿಗಳ ಸಂಚಾರದಿಂದ ರಸ್ತೆಗಳು ಸಂಪೂರ್ಣ ಹಳ್ಳಬಿದ್ದು ಧೂಳಿನಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿಗೆ ರೈತ ಸಂಘದ ಮಂಜೇಶ್ ಗೌಡ ನೇತೃತ್ವದಲ್ಲಿ ನೂರಾರು ಮಂದಿ ಮಹಿಳೆಯರು ಹಾಗೂ ಪುರುಷರು ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ತಾಲೂಕಿನ ಹಂಗರಹಳ್ಳಿ, ಕಾಳೇನಹಳ್ಳಿ, ಚೆನ್ನನಕೆರೆ, ಮುಂಡಗದೊರೆ ಸೇರಿದಂತೆ ಅರಣ್ಯ ವ್ಯಾಪ್ತಿ ಹಾಗೂ ಸಿದ್ದಾಪುರ ಜಕ್ಕನಹಳ್ಳಿ ಗಣಂಗೂರು ಗೌಡಹಳ್ಳಿ ಗೋಮಾಳಗಳಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಜೊತೆಗೆ ಗ್ರಾಮಗಳ ಮೂಲಕ ಹಾದು ಹೋಗುವ ಅಧಿಕ ಲೋಡ್ ತುಂಬಿದ ಭಾರೀ ವಾಹನಗಳಿಂದ ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರು ಸಹ ಅಕ್ರಮವನ್ನು ತಡೆಯಲು ತಾಲೂಕು ಆಡಳಿತ ವಿಫಲವಾಗಿದೆ ಎಂದು ದೂರಿದರು.

ಈ ಭಾಗದ ರಸ್ತೆಗಳಲ್ಲಿ 40 ಟನ್‌ಗೂ ಅಧಿಕ ತೂಕದ ಜೆಲ್ಲಿ, ಕಲ್ಲು, ಎಂ.ಸ್ಯಾಂಡ್ ತುಂಬಿದ ಬೃಹತ್ ಲಾರಿಗಳು ಓಡಾಟ ನಡೆಸುವುದರಿಂದ ರಸ್ತೆಗಳು ಸಂಪೂರ್ಣ ಹಳ್ಳಬಿದ್ದು ಧೂಳಿನಿಂದ ಆವರಿಸಿಕೊಂಡಿದೆ. ಇದರಿಂದ ಜನರಿಗೆ ಹಲವು ಖಾಯಿಲೆಗಳು ಬರುತ್ತಿವೆ. ಜಮೀನಿನ ಬೆಳೆಗಳ ಮೇಲೆ ಧೂಳು ತುಂಬಿ ಬೆಳೆ ನಷ್ಟವಾಗುತ್ತಿದೆ. ಇವೆಲ್ಲವೂ ಗೊತ್ತಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿ ಕೂಡಲೇ ಅಕ್ರಮ ಗಣಿಗಾರಿಕೆ ಹಾಗೂ ಕ್ರಷರ್ ವಾಹನಗಳ ಹಾವಳಿ ತಡೆಗಟ್ಟುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಸ್ಥಳಕ್ಕಾಗಮಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕೆಂಪೇಗೌಡ ಯುವಶಕ್ತಿ ವೇದಿಕೆ ಮಹೇಶ್, ದಲಿತ ಸಂಘಟನೆ ರವಿಚಂದ್ರ, ಕರವೇ ಚಂದಗಾಲು ಶಂಕರ್, ಕೊಡಿಶೆಟ್ಟಿಪುರ ತೇಜು, ಸೇರಿದಂತೆ ಕಾಳೆನಹಳ್ಳಿ, ಕೋಡಿಶೆಟ್ಟಿಪುರ ಹಾಗೂ ಇತರ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

Share this article