ಸುರಕ್ಷತೆಗಾಗಿ ಕುಮಾರಧಾರಾ ಸೇತುವೆಯಲ್ಲಿ ಸಂಚಾರ ನಿರ್ಬಂಧ

KannadaprabhaNewsNetwork | Published : Jul 5, 2024 12:51 AM

ಸಾರಾಂಶ

ಗುರುವಾರದಂದು ಉಪ್ಪಿನಂಗಡಿ ಪಂಚಾಯಿತಿ ಪಿಡಿಒ ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್ ಅವರು ಪಂಚಾಯಿತಿ ಸದಸ್ಯರು, ಗೃಹರಕ್ಷಕ ದಳದ ನೆರವಿನೊಂದಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಉಪ್ಪಿನಂಗಡಿ:ಉಪ್ಪಿನಂಗಡಿಯ ಬ್ರಿಟಿಷರ ಕಾಲದ ಕುಮಾರಧಾರಾ ಸೇತುವೆಯಲ್ಲಿ ಸುರಕ್ಷತಾ ಕಾರಣಕ್ಕೆ ವಾಹನ ಸಂಚಾರ ಹಾಗೂ ಜನ ಸಂಚಾರವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿಯವರ ಆದೇಶದನ್ವಯ ಬ್ಯಾರಿಕೇಡ್ ಅಳವಡಿಸಲಾಗಿದೆ.

೮೮ ವರ್ಷ ಹಳೆಯದಾದ ಸೇತುವೆಯ ಎರಡೂ ಪಾರ್ಶ್ವದಲ್ಲಿ ಕಬ್ಬಿಣದ ಸುರಕ್ಷಾ ವ್ಯವಸ್ಥೆಯಲ್ಲಿನ ಅಳವಡಿಸಲಾದ ರಾಡ್ ಗಳನ್ನು ಕಳ್ಳರು ಕದಿಯುತ್ತಿದ್ದು, ಇದರಿಂದಾಗಿ ಸೇತುವೆಯ ಕೆಲವೆಡೆ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ವರದಿಯೂ ಪ್ರಕಟವಾಗಿತ್ತು. ವರದಿಯ ಫಲಶೃತಿ ಎಂಬಂತೆ ಹಳೆಯ ಸೇತುವೆಯನ್ನು ನೋಡುವ ಕುತೂಹಲಿಗರ ಸಂಖ್ಯೆಯೂ ಹೆಚ್ಚಾಗಿ ಸೇತುವೆಯಲ್ಲಿ ನಿಂತು ಸೆಲ್ಫಿ ತೆಗೆಯುವ ವಿದ್ಯಾಮಾನಗಳು ಹೆಚ್ಚಾದವು. ಮಾತ್ರವಲ್ಲದೆ ಕತ್ತಲಾಗುತ್ತಿದ್ದಂತೆಯೇ ಭಾರೀ ಸಂಖ್ಯೆಯ ಜನರು ಈ ಸೇತುವೆಯಲ್ಲಿ ಜಮಾಯಿಸಿ ಮೀನಿಗೆ ಗಾಳ ಹಾಕುವುದು ಸಾಮಾನ್ಯವಾಗಿತ್ತು. ಇದನ್ನು ಯಾರೂ ಫೋಟೋ ತೆಗೆದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಗಮನಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಯಿಂದಾಗಿ ನದಿಯು ತುಂಬಿ ಹರಿಯುವುದರಿಂದ ಸಂಭಾವ್ಯ ಅಪಾಯಕ್ಕೆ ಸಿಲುಕುವ ಸಾಧ್ಯತೆಯನ್ನು ತಪ್ಪಿಸುವ ಸಲುವಾಗಿ ಸೇತುವೆಯಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರವನ್ನು ನಿಷೇಧಿಸಿ ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಗುರುವಾರದಂದು ಉಪ್ಪಿನಂಗಡಿ ಪಂಚಾಯಿತಿ ಪಿಡಿಒ ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್ ಅವರು ಪಂಚಾಯಿತಿ ಸದಸ್ಯರು, ಗೃಹರಕ್ಷಕ ದಳದ ನೆರವಿನೊಂದಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಮೈತುಂಬಿ ಹರಿಯಲಾರಂಭಿಸಿದ ಕುಮಾರಧಾರಾ, ನೇತ್ರಾವತಿ ನದಿ

ಉಪ್ಪಿನಂಗಡಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ಮೈ ತುಂಬಿ ಹರಿಯಲಾರಂಭಿಸಿದೆಯಾದರೂ ಅಪಾಯದ ಮಟ್ಟಕ್ಕಿಂತ ೫ ಮೀಟರ್ ಕೆಳಗೆ ನೀರಿನ ಹರಿವು ದಾಖಲಾಗಿದೆ. ಉಪ್ಪಿನಂಗಡಿಯಲ್ಲಿ ಹವಾಮಾನ ಇಲಾಖೆಯ ಪ್ರಕಾರ ಜು.೩ರಂದು ೬೮.೪ ಮಿ ಮೀಟರ್‌ ಮಳೆಯಾಗಿದ್ದು, ಗುರುವಾರದಂದು ಮಳೆಯ ಪ್ರಮಾಣ ಕಡಿಮೆ ಇದ್ದು, ದಿನವಿಡೀ ಹಗುರವಾದ ಮಳೆಯಾಗಿದೆ.ಗುರುವಾರ ಬೆಳಗ್ಗೆ ನದಿಯಲ್ಲಿ ನೀರಿನ ಮಟ್ಟವು ೨೬.೬ ರ ಮಟ್ಟದಲ್ಲಿ ನೀರಿನ ಹರಿವು ದಾಖಲಾಗಿದ್ದು, ಸಾಯಂಕಾಲದ ವೇಳೆಗೆ ನೀರಿನ ಹರಿವಿನ ಮಟ್ಟದಲ್ಲಿ ಕುಸಿತವುಂಟಾಗಿ ೨೬.೪ ಕ್ಕೆ ನೀರಿನ ಮಟ್ಟ ದಾಖಲಾಗಿತ್ತು.

Share this article