ಹುಬ್ಬಳ್ಳಿ:
ಪ್ರತಿ ಜೀವಕ್ಕೂ ಬೆಲೆ ಇದೆ. ಹೀಗಾಗಿ ಜೀವದ ಬೆಲೆ ಅರಿತು ವಾಹನ ಚಲಾಯಿಸಬೇಕು. ಸಂಚಾರಿ ನಿಮಯಗಳನ್ನು ಕಡ್ಡಾಯ ಪಾಲಿಸಬೇಕು ಎಂದು ಸಂಚಾರ ಪೊಲೀಸ್ ಠಾಣೆಯ ಎಸಿಪಿ ಡಾ. ವಿನೋದ ಮುಕ್ತೇದಾರ ಹೇಳಿದರು.ಭಾರತ ಸರ್ಕಾರ ನೆಹರು ಯುವ ಕೇಂದ್ರ ಧಾರವಾಡ, ಮೈ ಭಾರತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಸ್ತೆ ಸಾರಿಗೆ ಇಲಾಖೆ, ಹು-ಧಾ ಪೊಲೀಸ್ ಕಮಿಷನರೇಟ್, ಅಗ್ನಿಶಾಮಕ ಇಲಾಖೆ ಹಾಗೂ ಸನಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸನಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಯುವಕರು, ವಿದ್ಯಾರ್ಥಿಗಳು ಸಂಚಾರಿ ನಿಯಮ ಪಾಲಿಸಿ ತಮ್ಮ ಹಾಗೂ ಇತರರ ಪ್ರಾಣ ಹಾನಿ ತಪ್ಪಿಸಬಹುದು. ರಸ್ತೆ ಅಪಘಾತದಿಂದಾಗಿ ಸಾವಿಗೀಡಾಗುವವರಲ್ಲಿ ಯುವಜನತೆ ಹೆಚ್ಚಾಗಿದ್ದು, ದೇಶದ ಅತ್ಯಮೂಲ್ಯವಾದ ಆಸ್ತಿಯಾಗಬೇಕಿರುವ ಯುವಪೀಳಿಗೆ ಇನ್ನಾದರೂ ಎಚ್ಚೆತ್ತುಕೊಂಡು ಕಡ್ಡಾಯವಾಗಿ ಸುರಕ್ಷಾ ಸಾಧನ ಧರಿಸಿ ಅತ್ಯಂತ ಸುರಕ್ಷತೆಯಿಂದ ವಾಹನ ಚಾಲನೆ ಮಾಡಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ವಕೀಲೆ ಅಂಬಿಕಾ ಪಾಟೀಲ, ರಸ್ತೆ ಸುರಕ್ಷತಾ ವಿಚಾರದಲ್ಲಿ ಸಂಚಾರ ನಿಯಮ ಪಾಲಿಸುವ ಕುರಿತು ಪ್ರತಿಯೊಬ್ಬರೂ ಆತ್ಮ ಶೋಧನೆ ಮಾಡಿಕೊಳ್ಳಬೇಕು. ಇನ್ನೊಬ್ಬರ ಜೀವಕ್ಕೂ ಬೆಲೆ ಇದೆ ಎನ್ನುವ ವಾಸ್ತವ ಅರಿತುಕೊಂಡು ರಸ್ತೆಯಲ್ಲಿ ವಾಹನ ಚಲಾವಣೆ ಮಾಡಬೇಕು ಎಂದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎಂ. ಗೌತಮ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ನಂತರದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.ಅಮರಗೋಳ ಅಗ್ನಿಶಾಮಕ ಅಧಿಕಾರಿ ಬಸವರಾಜ ಕರಲಿಂಗನ್ನವರ, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಆಯುಬ್ ಸವಣೂರ ಪ್ರಾಂಶುಪಾಲ ಡಾ, ಆರ್.ಎಸ್. ಪಟಗೆ ಮತ್ತು ನೆಹರು ಯುವ ಕೇಂದ್ರದ ಸ್ವಯಂ ಸೇವಕ ಶಿವಾಜಿ ಎನ್.ಕೆ. ಕಿರಣ ಮುದೆಣ್ಣವರ ಹಾಗೂ ಕಾಲೇಜ್ ಸಿಬ್ಬಂದಿ ಭಾಗವಹಿಸಿದ್ದರು.